ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದಲ್ಲಿ ಬಿಪಿಸಿಎಲ್ ಮುಂಬೈ ಸೆಮಿಫೈನಲ್ ಪ್ರವೇಶಿಸಿದೆ. ಎರಡನೇ ದಿನ ನಡೆದ ಮೊದಲ ಕ್ವಾರ್ಟರ್ ಫೈನಲ್ನ ರೋಚಕ ಪಂದ್ಯದಲ್ಲಿ
ಬಲಿಷ್ಠ ಬಿಪಿಸಿಎಲ್ ತಂಡವು ಈಶ್ವರಿ ಬೆಂಗಳೂರು ತಂಡದವನ್ನು 33-22 ಪಾಯಿಂಟ್ ಅಂತರದಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿತು. ರಾಷ್ಟ್ರೀಯ ಮತ್ತು ಪ್ರೊ ಕಬಡ್ಡಿ ಆಟಗಾರರನ್ನು ಒಳಗೊಂಡ ಬಿಪಿಸಿಎಲ್ ಆರಂಭದಿಂದಲೇ ಭರ್ಜರಿ ದಾಳಿ ಮತ್ತು ಹಿಡಿತದ ಮೂಲಕ ಅಂಕಗಳನ್ನು ಪಡೆದು ಮುನ್ನುಗ್ಗಿತು. ಅರ್ಧ ವಿರಾಮದ ವೇಳೆಗೆ ಬಿಪಿಸಿಎಲ್21-7 ಅಂಕಗಳೊಂದಿಗೆ ಭಾರೀ
ಮುನ್ನಡೆ ಸಾಧಿಸಿತು. ಅರ್ಧ ವಿರಾಮದ ಬಳಿಕವೂ ಬಿಪಿಸಿಎಲ್ ತಮ್ಮ ಭರ್ಜರಿ ಆಟವನ್ನು ಮುಂದುವರಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅರ್ಧ ವಿರಾಮದ ಬಳಿಕ ಪುಟಿದೆದ್ದ ಈಶ್ವರಿ ತಂಡ ಕೆಲವು ಅದ್ಭುತ ದಾಳಿ ಮತ್ತು ಹಿಡಿತದ ಮೂಲಕ ನೆರೆದ ಪ್ರೇಕ್ಷಕರಿಗೆ ಮುದ ನೀಡಿತು. ಬಿಪಿಸಿಎಲ್ ತಂಡಕ್ಕೆ ತೀವ್ರ ಪೈಪೋಟಿ ನೀಡಿ ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ಯಿತು.









