ಸುಳ್ಯ:ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನವೆಂಬರ್ 19 ಮತ್ತು 20ರಂದು ಎರಡು ದಿನಗಳ ಕಾಲ ನಡೆದ ವಾರ್ಷಿಕ ಕ್ರೀಡೋತ್ಸವ ‘ಪ್ಲೇ ಎಕ್ಸೈಟ್’ ಸಂಪನ್ನಗೊಂಡಿತು.ನವೆಂಬರ್ 19ರಂದು ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ನವೆಂಬರ್ 20ರಂದು ಆರರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮೊದಲ ದಿನ ವಿದ್ಯಾರ್ಥಿಗಳ
ಆಕರ್ಷಕ ಪಥಸಂಚಲನದೊಂದಿಗೆ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಬಾಲಚಂದ್ರ ಗೌಡ ಅವರು ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲ ಅನಿಶ್ ನಾದ್ ಅವರು, ಶಾಲಾ ಕ್ರೀಡಾಕೂಟವು ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು
ಉತ್ತಮ ವೇದಿಕೆಯಾಗಿದ್ದು, ಕ್ರೀಡೆಯು ಶಿಸ್ತು, ಆತ್ಮವಿಶ್ವಾಸ, ಸಹಕಾರ ಹಾಗೂ ತಂಡ ಮನೋಭಾವವನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಎರಡು ದಿನಗಳ ಕಾಲ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶಾಲೆಯ ನಾಲ್ಕು ತಂಡಗಳಾದ ರೆಡ್ ರೂಬಿ, ಗ್ರೀನ್ ಎಮರಾಲ್ಡ್, ಯೆಲ್ಲೋ ಡೈಮಂಡ್ ಹಾಗೂ ಬ್ಲೂ ಸಫೈರ್ ತಂಡಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕೆವಿಜಿ
ಐಪಿಎಸ್ನ ದೈಹಿಕ ಶಿಕ್ಷಣ ಶಿಕ್ಷಕಿಯರಾದ ಶ್ರೀಮತಿ ಆಶಾ ಜ್ಯೋತಿ ಮತ್ತು ತೀರ್ಥವರ್ಣ ಬಳ್ಳಡ್ಕ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಜಯಚಂದ್ರ ಹಾಗೂ ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನ ಅಕ್ಷತಾ ಅವರ ಮಾರ್ಗದರ್ಶನದಲ್ಲಿ ಕ್ರೀಡಾ ಕೂಟ ನಡೆಯಿತು. ರೆಡ್ ರೂಬಿ ತಂಡ ಪ್ರಥಮ ಸ್ಥಾನ, ಗ್ರೀನ್ ಎಮರಾಲ್ಡ್ ತಂಡ ದ್ವಿತೀಯ ಸ್ಥಾನ, ಬ್ಲೂ ಸಫೈರ್ ತಂಡ ತೃತೀಯ ಸ್ಥಾನ ಹಾಗೂ ಯೆಲ್ಲೋ ಡೈಮಂಡ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡವು.
ಕ್ರೀಡೋತ್ಸವದ ಅಂಗವಾಗಿ ಶಿಕ್ಷಕರಿಗೂ ವಿವಿಧ ಮನರಂಜನಾತ್ಮಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಎ.ಒ.ಎಲ್.ಇ. ಕಮಿಟಿ ಬಿ ಇದರ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಅಡ್ತಲೆ, ಪ್ರಸನ್ನ ಕಲ್ಲಾಜೆ ಸೇರಿದಂತೆ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ನಿಯಾ ಶೆಟ್ಟಿ ಹಾಗೂ ಪ್ರಪುಲ್ಲಾ ಅವರೊಂದಿಗೆ ಶಿಕ್ಷಕಿಯರಾದ ಹರ್ಷಿತಾ ಮತ್ತು ಭವ್ಯ ಕೆ. ನಿರೂಪಿಸಿದರು. ಮನಸ್ವಿ ಆರ್. ಪ್ರಸಾದ್ ಸ್ವಾಗತಿಸಿದರು. ಕ್ಷಿತಿ ಎನ್. ಮುರೂರು ವಂದನಾರ್ಪಣೆ ಸಲ್ಲಿಸಿದರು.ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ, ಕ್ರೀಡಾಸ್ಫೂರ್ತಿಯ ಅನಾವರಣದೊಂದಿಗೆ ‘ಪ್ಲೇ ಎಕ್ಸೈಟ್’ ಕ್ರೀಡೋತ್ಸವ ಸಂಪನ್ನಗೊಂಡಿತು.














