ಕಾನ್ಸಸ್ ಸಿಟಿ:ವಿಶ್ವಪ್ರಸಿದ್ಧ ಫುಟ್ಬಾಲ್ ತಾರೆ ಲೊಯೋನೆಲ್ ಮೆಸ್ಸಿ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಫಿಫಾ ವಿಶ್ವಕಪ್ನ ತಮ್ಮ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಅಲ್ಜೀರಿಯಾ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿ ಶುಭಾರಂಭ ಮಾಡಿತು.17ನೇ ನಿಮಿಷದಲ್ಲಿ
ಮೊದಲ ಗೋಲು ಬಾರಿಸಿದ ಮೆಸ್ಸಿ 60 ಮತ್ತು 76ನೇ ನಿಮಿಷದಲ್ಲಿ ಎರಡು ಗೋಲು ಬಾರಿಸಿ ಹ್ಯಾಟ್ರಿಕ್ ಸಾಧಿಸಿದರು. ವಿಶ್ವಕಪ್ ಫುಟ್ಬಾಲ್ನಲ್ಲಿ ಮೆಸ್ಸಿ ಅವರ ಮೊದಲ ಹ್ಯಾಟ್ರಿಕ್ ಇದಾಗಿದೆ.
ಕಿಲಿಯನ್ ಎಂಬಾಪೆ ಅವರ ಆಕರ್ಷಕ ಎರಡು ಗೋಲುಗಳ ನೆರವಿನಿಂದ ಅಬ್ಬರಿಸಿದ ಫ್ರಾನ್ಸ್ ತಂಡ, ‘ಐ’ ಗುಂಪಿನ ಪಂದ್ಯದಲ್ಲಿ ಸೆನೆಗಲ್ ವಿರುದ್ಧ 3-1 ಗೋಲುಗಳ ಭರ್ಜರಿ ಜಯ ದಾಖಲಿಸಿದೆ.ಫ್ರಾನ್ಸ್ 66ನೇ, 82ನೇ ನಿಮಿಷ ಮತ್ತು ಪಂದ್ಯದ ಕೊನೆಯ ಕ್ಷಣದಲ್ಲಿ ಮೂರು ಗೋಲುಗಳನ್ನು ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಫ್ರಾನ್ಸ್ ಪರವಾಗಿ ಎಂಬಾಪೆ 2 ಹಾಗೂ ಬ್ರಾಡ್ಲಿ ಬಾರ್ಕೋಲಾ 1 ಗೋಲು ಗಳಿಸಿದರು.
‘ಐ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಇರಾಕ್ ವಿರುದ್ಧ ನಾರ್ವೆ 4-1 ಗೋಲುಗಳ ಭರ್ಜರಿ ಜಯ ಸಾಧಿಸಿತು. ನಾರ್ವೆ ಪರ ವಿಶ್ವಕಪ್ಗೆ ಪದಾರ್ಪಣೆ ಮಾಡಿದ ಎರ್ಲಿಂಗ್ ಹಾಲೆಂಡ್ ಎರಡು ಗೋಲು ಗಳಿಸುವ ಮೂಲಕ ಮಿಂಚಿದರು.
ಬೆಲ್ಜಿಯಂ– ಈಜಿಪ್ಟ್ ಮತ್ತು ಸೌದಿ ಅರೇಬಿಯಾ– ಉರುಗ್ವೆ ತಂಡಗಳು 1–1ರ ಸಮಬಲ ಸಾಧಿಸಿದವು. ಇರಾನ್– ನ್ಯೂಜಿಲೆಂಡ್ ಪಂದ್ಯ 2–2ರಲ್ಲಿ ಸಮಬಲವಾಯಿತು.








