ಸುಳ್ಯ:ಪ್ರಕೃತಿಯ ಜೊತೆ ಒಮ್ಮೆ ಬೆರೆತರೆ, ಪ್ರಕೃತಿಯ ಅಗಾಧತೆಯ ಒಳಗೆ ಹೊಕ್ಕರೆ ಮತ್ತೆ ಪರಿಸರವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ತಾನು ಬೆಳೆಸಿದ ಮರ ಗಿಡಗಳನ್ನು ನೋಡಿದಾಗ, ಹಕ್ಕಿಗಳ ಚಿಲಿಪಿಲಿ ನಾದ ಕೇಳಿದಾಗ ದೇಹದ, ಮನಸ್ಸಿನ ಆಯಾಸಗಳೆಲ್ಲವೂ ದೂರವಾಗಿ ಸಂತೋಷ, ಜೀವನೋತ್ಸಾಹ ಚಿಮ್ಮುತ್ತದೆ ಎಂದು ಖ್ಯಾತ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ
‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ತಮ್ಮ ಮನದಾಳದ ಆಶಯಗಳನ್ನು ಹಂಚಿಕೊಂಡರು.ಪ್ರಕೃತಿಗೆ, ಮರ ಗಿಡಗಳಿಗೆ, ಪ್ರಾಣಿ ಪಕ್ಷಗಳಿಗೆ ಜಾತಿ, ಧರ್ಮದ ಭೇದ ಭಾವ ಇಲ್ಲ, ಪ್ರಕೃತಿಯಿಂದ ನಾವು ಕಲಿಯಬೇಕಾದ ಸಮಾನತೆಯ ಪಾಠ ಬಹಳಷ್ಟಿದೆ. ಒಂದು ಇರುವೆ ಸೇರಿದಂತೆ ಸಕಲ ಜೀವರಾಶಿಗಳು ನಮಗೆ ಬದುಕಿನ ಪಾಠ ಕಲಿಸುತ್ತದೆ. ಜೀವರಾಶಿಯಿಂದ ಪಾಠ ಕಲಿತರೆ, ಪ್ರಕೃತಿಯ ಮುಂದೆ ತಲೆ ತಗ್ಗಿಸಿ ಬದುಕಿದರೆ ಮಾತ್ರ ಮಾನವರಾಶಿ ಉಳಿಯಲು ಸಾಧ್ಯ. ಆದರೆ ಈಗ ಹಾಗೆ ಆಗ್ತಾ ಇಲ್ಲಾ, ಪ್ರಕೃತಿಯನ್ನು ನಾಶ ಪಡಿಸಿ, ಭೂಮಿಗೆ ವಿಷ ಇಕ್ಕುವುದರಿಂದ ಪ್ರಕೃತಿ ಸೃಷ್ಟಿಯ ಯುಗವನ್ನೇ ಪರಿವರ್ತನೆ ಮಾಡಲು ಶ್ರಮಿಸುವುದು ಒಳಿತಲ್ಲ ಎಂದರು.

ತಾನು ಒಬ್ಬ ಕೈಗಾರಿಕೋದ್ಯಮಿ ಆಗಿದ್ದರೂ ಪರಿಸರ, ಸಮಾಜದ ಬಗ್ಗೆಗಿನ ತುಡಿತ ಹಾಗೂ ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಇದ್ದಂತೆ ತನ್ನೊಳಗಿದ್ದ ಪ್ರತಿಭೆಯಿಂದ ಪರಿಸರದ ಕೆಲಸ ಮಾಡಲು ಸಾಧ್ಯವಾಯಿತು ಎಂಬುದು ತನ್ನ ಅನಿಸಿಕೆ ಎಂದು ಅವರು ಹೇಳಿದರು. ತಾನು ಒಬ್ಬ ಆಂದೋಲನಕಾರ ಅಲ್ಲ, ತಾನೊಬ್ಬ ಪ್ರಕೃತಿಯ ಆರಾಧಕ ಮತ್ತು ಸಲಹಾ ಜೀವಿ ಎಂದು ಹೇಳಿದರು. ಉಮ್ಮರ್ಗಾವ್ನಲ್ಲಿ ರಸ್ತೆ ಅಗಲೀಕರಣಕ್ಕೆ ಮರ ಕಡಿದಾಗ ಕಂಡ ಪಕ್ಷಿಗಳ ರೋದನ ಈ ನಿಟ್ಟಿನಲ್ಲಿ ಯೋಚನೆ ಮಾಡಲು ಪ್ರೇರೇಪಣೆ ನೀಡಿತು.ತಾವು ಖರೀದಿಸಿದ ಒಂದು ಎಕ್ರೆ ಸ್ಥಳದಲ್ಲಿ ಆರಂಭಗೊಂಡ ಕಾಡು ಬೆಳೆಸುವ ಯೋಜನೆ ಇಂದು 12 ರಾಜ್ಯಗಳಲ್ಲಿ 32 ಲಕ್ಷಕ್ಕೂ ಅಧಿಕ ಗಿಡಗಳನ್ನು ಒಳಗೊಂಡ 123 ಕಾಡು ಪೂರ್ತಿಗೊಂಡಿದೆ. ಒಂದು ಕಾಡು ಎಂದರೆ ಅದೊಂದು ವೈವಿಧ್ಯತೆಯ ತಾಣ.ಆ ವೈವಿಧ್ಯತೆ ಉಳಿಸಲು ವಿವಿಧ ಜಾತಿ, ಪ್ರಭೇದಗಳ ಗಿಡಗಳನ್ನು ಒಳಗೊಂಡ ಕಾಡುಗಳನ್ನು ಸೃಷ್ಠಿಸಿದ್ದೇನೆ.
ವಾಣೀಜ್ಯ ದೃಷ್ಠಿಯಿಂದ ಮರ ಬೆಳೆಯುವುದಿಲ್ಲ:
ಕಡಿಯುವುದಕ್ಕಾಗಿ ಅಥವಾ ವಾಣೀಜ್ಯ ದೃಷ್ಠಿಯಿಂದ ಕಾಡುಗಳನ್ನು ಬೆಳೆಸುವುದಿಲ್ಲ. ಹೆಮ್ಮರಗಳನ್ನು ಬೆಳೆಸುವ ಬದಲು ಎಲ್ಲಾ ಪ್ರಭೇಧದ ಗಿಡಗಳನ್ನು ಬೆಳೆಸುತ್ತೇನೆ. ಕಡಿಯಲು ಹಾಗೂ ವಾಣೀಜ್ಯ ಉದ್ದೇಶಕ್ಕೆ ಮರ ಬೆಳೆಯುವುದಿಲ್ಲ ಎಂದು ತಾನು ಕಾಡು ಬೆಳೆಸುವ ಸಂದರ್ಭದಲ್ಲಿನ ಒಪ್ಪಂದದಲ್ಲೇ ನಮೂದಿಸುತ್ತೇನೆ ಎಂದರು. ಜಪಾನ್ನ ಮಿಯಾವಾಕಿ ಮಾದರಿಯನ್ನು ಶೇ.90 ರಷ್ಟು ಬದಲಾವಣೆ ಮಾಡಿ ‘ಭಾರತವನ’ವನ್ನು ಸೃಷ್ಠಿಸಲಾಗಿದೆ. ಹೊರಗಿನಿಂದ ಮಣ್ಣು ತಂದು ಹಾಕಿ ಗಿಡ ಬೆಳೆಯುವುದಿಲ್ಲ, ಮರಳಾಗಲೀ,ಮಣ್ಣಾಗಲಿ, ಸಮುದ್ರ ಬದಿ ಆಗಲೀ ಆಯಾ ಪ್ರದೇಶದ ಮಣ್ಣಿನಲ್ಲಿಯೇ ಗಿಡ ಬೆಳೆಸುತ್ತೇನೆ. 3 ವರ್ಷಗಳ ಕಾಲ ನೀರು, ಗೊಬ್ಬರ ಹಾಕಿ ಪೋಷಣೆ ಮಾಡಬೇಕು. ಕಾಡು ಬೆಳೆಸಲು ಅಸಾಧ್ಯವೆಂದೇ ಹೇಳಲಾದ ರಾಜಸ್ತಾನದ ಮರುಭೂಮಿ,ಕಡಲ ಕಿನಾರೆಗಳಲ್ಲಿ, ಒಣ ಪ್ರದೇಶದಲ್ಲಿ ಕಾಡು ಬೆಳೆಸಲು ಸಾಧ್ಯವಾಗಿದೆ.ಭೂಕಂಪ ಪೀಡಿತ ಕಚ್ ಪ್ರದೇಶದಲ್ಲಿ ನಿರ್ಮಿಸಿದ ಸ್ಮೃತಿ ವನದಲ್ಲಿ 5.75 ಲಕ್ಷ ಗಿಡ ನೆಡಲಾಗಿದೆ.
ಇನ್ನೂ 5 ಲಕ್ಷ ಗಿಡ ನೆಡುವ ಯೋಜನೆ ಇದೆ. ತಮ್ಮ ಕಾಡಿನ ಪರಿಣಾಮ ಹೊಸ ಆವಾಸ ವ್ಯವಸ್ಥೆಯೇ ರೂಪುಗೊಂಡಿದೆ.
ಪಕ್ಷಿಗಳು,ದುಂಬಿಗಳು, ಸಣ್ಣ ಪ್ರಾಣಿಗಳು ಅಲ್ಲಿ ಬದುಕು ಆರಂಭಿಸಿದೆ. ಪರಸರದ ಉಷ್ಣಾಂಶ ಕಡಿಮೆ ಆಗಿದೆ, ಮಳೆ ಹೆಚ್ಚಾಗಿದೆ, ಮಣ್ಣಿನ ಸವಕಳಿ ನಿಂತಿದೆ, ಪರಸರವಿಡೀ ಜಲ ಸಮೃದ್ಧವಾಗಿದೆ ಎಂದು ಅವರು ವಿವರಿಸಿದರು.ವಿವಿಧ ಕಂಪೆನಿಗಳ ಸಿಎಸ್ಆರ್ಎಸ್ ಫಂಡ್ಗಳ ನೆರವಿನಿಂದ ಈ ರೀತಿ ಕಾಡು ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಸುಳ್ಯದಲ್ಲಿ ಮಾತ್ರ ಕಾಡು ಬೆಳೆಸಲು ಅನುಮತಿ ಸಿಕ್ಕಿಲ್ಲ:
ದೇಶದ ಯಾವುದೇ ರಾಜ್ಯಗಳಲ್ಲಿ ಕಾಡು ಬೆಳೆಸಲು ತನಗೆ ಕೇವಲ ಒಂದು ದಿನದಲ್ಲಿ ಅನುಮತಿ ಸಿಗುತ್ತದೆ. ಆದರೆ ಸುಳ್ಯದಲ್ಲಿ ಕಾಡು ಬೆಳೆಸಬೇಕೆಂದು ಹಲವು ವರ್ಷಗಳಿಂದ ಪ್ರಯತ್ನ ನಡೆಸಿದರೂ ಅನುಮತಿ ಸಿಕ್ಕಿಲ್ಲ ಎಂದು ಅವರು ಹೇಳಿದರು. ಸುಳ್ಯ ಶಾಂತಿನಗರದ ಕ್ರೀಡಾಂಗಣದ ಕೆಳಭಾಗದಲ್ಲಿ ಹಾಕಿದ ಮಣ್ಣಿನಲ್ಲಿ ತನ್ನದೇ ಸ್ವಂತ ಖರ್ಚಿನಿಂದ 10 ಸಾವಿರ ಗಿಡ ನೆಟ್ಟು ಕಾಡು ಬೆಳೆಸಲು ಅನುಮತಿ ಕೋರಿ ಮೂರು ವರ್ಷದಿಂದ ನಿರಂತರ ಪ್ರಯತ್ನಿಸಿದರೂ ಅನುಮತಿ ಸಿಕ್ಕಿಲ್ಲ. ಕಸ ತುಂಬಿದ ಕಲ್ಚರ್ಪೆಯಲ್ಲಿನ ಕಸದ ರಾಶಿಯ ಮಧ್ಯೆ ಸುಂದರ ಹಸಿರು ಪರಿಸರ ಸೃಷ್ಠಿಸಲು ಯೋಜನೆ ರೂಪಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಬೇಷರ ವ್ಯಕ್ತಪಡಿಸಿದರು. ತನಗೆ ಆ ಭೂಮಿ ಬೇಡ, ಅದರ ಹಕ್ಕೂ ಬೇಡ, ಅಲ್ಲಿ ಗಿಡ ನೆಟ್ಟು ಪೋಷಣೆ ಮಾಡಿ ಕಾಡು ಸೃಷ್ಠಿಸಿ ನೀಡುವುದಷ್ಟೇ ತನ್ನ ಕಾಯಕ ಎಂದರು.
ಸುಳ್ಯ ಎಂದರೆ ತನ್ನ ಹೃದಯ, ಬಾಲ್ಯದ ನೆನಪುಗಳು ಸದಾ ಆ ಹೃದಯದಲ್ಲಿ ಇರುತ್ತದೆ, ಬಾಲ್ಯದ ನೆನಪುಗಳೆಂದರೆ ಅದು ಸುಳ್ಯ ಎಂದರು. ಆದರೆ ಸ್ವಾತಂತ್ರ್ಯ ಬಂದು ಎಂಟು ದಶಕಗಳಾಗುತ್ತಾ ಬಂದರೂ ಇಲ್ಲಿನ ವಿದ್ಯುತ್ ಸೇರಿದಂತೆ ಮೂಲಭೂತ ಅವಶ್ಯಕತೆಗಳು ಪೂರೈಸದೇ ಇರುವುದು ದುರದೃಷ್ಠಕರ ಎಂದು ಅವರು ಹೇಳಿದರು.
ಪರಿಸರ ಸರ್ಟಿಫಿಕೇಟ್ ಕೋರ್ಸ್:
ಯಾವುದೇ ಪ್ರಾಯ ವ್ಯತ್ಯಾಸ ಇಲ್ಲದೆ ಎಲ್ಲರಿಗೂ ಪರಿಸರ ಅಧ್ಯಯನ ನಡೆಸುವ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವ ಇರಾದೆ ಇದೆ. ಈ ಕುರಿತು ತಜ್ಞರ ಜೊತೆ ಚಿಂತನೆ ನಡೆಸಲಾಗುತಿದೆ ಎಂದು ಅವರು ಹೇಳಿದರು. ತಮ್ಮದೇ ಕಾಡುಗಳಲ್ಲಿ ಬಂದು ನಿರ್ದಿಷ್ಟ ದಿನಗಳ ಅಧ್ಯಯನ ನಡೆಸಿದರೆ ಸರ್ಟಿಫಿಕೇಟ್ ಕೊಡುವ ಕೋರ್ಸ್ ಅದು. ಹೊಸ ತಲೆಮಾರಿನಲ್ಲಿ ಪರಿಸರ ಪ್ರೀತಿ ಬೆಳೆಸಲು ಇದು ಸಹಾಯಕವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಯಾರೇ ಕಾಡು ಬೆಳೆಸುವುದು ಲೆಕ್ಕ ಭರ್ತಿಯ, ಕಾಟಾಚಾರದ ಕೆಲಸ ಆಗಬಾರದು. ಅದು ಮನಪೂರ್ವಕ ಮತ್ತು ಪ್ರಾಮಾಣಿಕವಾಗಿ ಮಾಡಿದರೆ ಮಾತ್ರ ಅದರಿಂದ ಫಲ ಬರಲು ಸಾಧ್ಯ ಎಂದು ಹೇಳಿದರು. ಗಲ್ಫ್ ರಾಷ್ಟ್ರಗಳಲ್ಲಿ ಕಾಡು ಬೆಳೆಸುವ ಪ್ರಯತ್ನ ಅಲ್ಲಿನ ಸರಕಾರಗಳು ಮಾಡುತಿದೆ. ಈ ಕುರಿತು ಮಾತುಕತೆ ನಡೆದಿದೆ. ಅವಕಾಶ ಸಿಕ್ಕಿದರೆ ಗಲ್ಫ್ ರಾಷ್ಟ್ರಗಳ ಮರಳುಗಾಡಿನಲ್ಲಿ ಕಾಡು ಬೆಳೆಸುವ ಆಸಕ್ತಿ ಇದೆ ಎಂದು ಅವರು ಹೇಳಿದರು.
ಡಾ.ಆರ್.ಕೆ.ನಾಯರ್ ಅವರನ್ನು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಕೋಶಾಧಿಕಾರಿ ಈಶ್ವರ ವಾರಣಾಸಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ ಸ್ವಾಗತಿಸಿ, ನಿರ್ದೇಶಕ ಗಂಗಾಧರ ಕಲ್ಲಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜೊತೆ ಕಾರ್ಯದರ್ಶಿ ಹಸೈನಾರ್ ಜಯನಗರ ವಂದಿಸಿದರು.