ಜೈಪುರ: ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಅಂತರದ ಜಯ ದಾಖಲಿಸಿದೆ. ಆ ಮೂಲಕ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ (53) ಹಾಗೂ ಮಾರ್ಕಸ್ ಸ್ಟೋಯಿನಿಸ್ (44) ಅಮೋಘ ಬ್ಯಾಟಿಂಗ್ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ
ಡೆಲ್ಲಿ ಸಮೀರ್ ರಿಝ್ವಿ ಬಿರುಸಿನ ಅರ್ಧಶತಕದ (58) ಬಲದಿಂದ 19.3 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
25 ಎಸೆತಗಳನ್ನು ಎದುರಿಸಿದ ರಿಝ್ವಿ ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 58 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಡೆಲ್ಲಿ ಪರ ಕರುಣ್ ನಾಯರ್ (44), ಕೆ.ಎಲ್. ರಾಹುಲ್ (35), ನಾಯಕ ಫಫ್ ಡುಪ್ಲೆಸಿ (23) ಹಾಗೂ ಟ್ರಿಸ್ಟನ್ ಸ್ಟಬ್ಸ್ ಉಪಯುಕ್ತ ಕಾಣಿಕೆ ನೀಡಿದರು.
ಚೊಚ್ಚಲ ಪ್ರಶಸ್ತಿಯ ಹುಡುಕಾಟದಲ್ಲಿದ್ದ ಡೆಲ್ಲಿಗೆ ಪ್ಲೇ-ಆಫ್ ಕನಸು ಸ್ವಲ್ಪದರಲ್ಲೇ ಕೈತಪ್ಪಿದೆ. ಆಡಿರುವ 14 ಪಂದ್ಯಗಳಲ್ಲಿ ಏಳು ಗೆಲುವು, ಆರು ಸೋಲಿನೊಂದಿಗೆ 16 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಈ ಸೋಲಿನ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಎರಡನೇ ಸ್ಥಾನ ಕಾಯ್ದುಕೊಂಡಿದೆ. 13 ಪಂದ್ಯಗಳಲ್ಲಿ ಎಂಟು ಗೆಲುವಿನೊಂದಿಗೆ 17 ಅಂಕಗಳನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಷ್ಟೇ ಅಂಕಗಳನ್ನು ಹೊಂದಿದ್ದರೂ ಉತ್ತಮ ರನ್ ರೇಟ್ ಆಧಾರದಲ್ಲಿ ಪಂಜಾಬ್ ಎರಡನೇ ಸ್ಥಾನ ಕಾಯ್ದುಕೊಂಡಿದೆ.ಪಂಜಾಬ್ +0.327 ಹಾಗೂ ಆರ್ಸಿಬಿ +0.255 ರನ್ ರೇಟ್ ಕಾಯ್ದುಕೊಂಡಿದೆ. ಹಾಗಾಗಿ ಅಗ್ರ ಎರಡು ಸ್ಥಾನಗಳಲ್ಲಿ ಗುರುತಿಸುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಕೊನೆಯ ಪಂದ್ಯಗಳು ನಿರ್ಣಾಯಕವೆನಿಸಿವೆ.
ಮೇ 27ರಂದು ಆರ್ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಎಕನಾ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಇದಕ್ಕೂ ಒಂದು ದಿನ ಮೊದಲು ಪಂಜಾಬ್ನ ಕೊನೆಯ ಪಂದ್ಯ ನಡೆಯಲಿದೆ. ಮೇ 26ರಂದು ಜೈಪುರದಲ್ಲಿ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.
ಸದ್ಯ 13 ಪಂದ್ಯಗಳಲ್ಲಿ ಒಂಬತ್ತು ಗೆಲುವಿನೊಂದಿಗೆ 18 ಅಂಕ ಗಳಿಸಿರುವ ಗುಜರಾತ್ ಟೈಟನ್ಸ್ ಅಗ್ರಸ್ಥಾನದಲ್ಲಿದೆ. ಇಂದು (ಭಾನುವಾರ) ಅಹದಾಬಾದ್ನಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ.ಅಲ್ಲದೆ ಅಗ್ರಸ್ಥಾನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಈ ಪಂದ್ಯದಲ್ಲಿ ಸೋತರೆ ಅಗ್ರಸ್ಥಾನಕ್ಕೆ ಕಂಟಕ ಎದುರಾಗಲಿದೆ.