ಸುಳ್ಯ: ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮರಾಟಿ ಬಾಂಧವರ ವಾರ್ಷಿಕ ಕ್ರೀಡಾ ಕೂಟ ಫೆ.9ರಂದು ಗಿರಿದರ್ಶಿನಿ ವಠಾರದಲ್ಲಿ ನಡೆಯಲಿದೆ ಎಂದು ಮರಾಟಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್
ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಕ್ರಿಯಾಶೀಲವಾಗಿ
ಕಾರ್ಯನಿರ್ವಹಿಸುತ್ತಿದ್ದು ಸಂಘದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ.ಸಂಘವು ಆರಂಭದಿಂದಲೂ ಮರಾಟಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ.ಪ್ರತಿ ವರ್ಷ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ.
Lಇದೀಗ ಸಮಾಜ ಬಾಂಧವರ ಸಂಘಟನೆಯ ದೃಷ್ಟಿಯಿಂದ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಎಲ್.ಕೆ.ಜಿ.,ಯು.ಕೆ.ಜಿ.ಯಿಂದ ಆರಂಭಗೊಂಡು 60ವರ್ಷ ಮೇಲ್ಪಟ್ಟವರಿಗೂ ವಿವಿಧ ಸ್ಪರ್ಧೆಗಳು, ಮನೋರಂಜನಾ ಸ್ಪರ್ಧೆಗಳು ಹಾಗೂ ಗುಂಪು ಸ್ಫರ್ಧೆಗಳು ನಡೆಯಲಿದೆ ಎಂದು ತಿಳಿಸಿದರು.
ಕ್ರೀಡಾಕೂಟವನ್ನು ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಉದ್ಘಾಟಿಸಲಿದ್ದಾರೆ. ನ.ಪಂ.ಉಪಾಧ್ಯಕ್ಷ ಜಿ.ಬುದ್ದ ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಂದು ಅವರು ಹೇಳಿದರು.

31 ವರ್ಷದಿಂದ ಯಶಸ್ವಿ ಕಾರ್ಯ ನಿರ್ವಹಣೆ:
ಸಂಘವು 1993ರಲ್ಲಿ ಆರಂಭವಾಗಿ 31 ವರ್ಷ ದಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸೇಸು ನಾಯ್ಕ ಅರಂಬೂರು ಅವರ ಮುತುವರ್ಜಿಯಲ್ಲಿ ಸುಮಾರು 200ಮಂದಿ ಸಮಾಜ ಬಾಂಧವರ ಸೇರುವಿಕೆಯೊಂದಿಗೆ ಆರಂಭಗೊಂಡ ಮರಾಟಿ ಸಂಘಕ್ಕೆ 31ವರ್ಷಗಳು ಸಂದಿವೆ. ನಿರಂತರ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಿತ ಜಾತಿ ಸಂಘಟನೆಯಾಗಿ ಬೆಳೆದಿರುವ ಮರಾಟಿ ಸಂಘ 2018ರಲ್ಲಿ ಬೆಳ್ಳಿ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿದೆ. ಸ್ಥಾಪಕ ಅಧ್ಯಕ್ಷರಾಗಿ ದೇವಪ್ಪ ನಾಯ್ಕ ಹೊನ್ನೇಡಿಯವರಿಂದ ಆರಂಭಗೊಂಡು ಹಲವಾರು ಮಂದಿ ಸಂಘವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ್ದಾರೆ. ದೇವಪ್ಪ ನಾಯ್ಕ ಹೊನ್ನೇಡಿ, ಡಾ.ಎಸ್.ರಂಗಯ್ಯ, ದಾಮೋದರ ಮಂಚಿ, ಕೆ.ಬಟ್ಯ ನಾಯ್ಕ, ಎ.ಕೆ.ನಾಯ್ಕ ಚೊಕ್ಕಾಡಿ, ಗೋಪಾಲ ನಾಯ್ಕ ದೊಡ್ಡೇರಿ,ಶ್ರೀಮತಿ ಗಿರಿಜಾ ಎಂ.ವಿ., ಜಿ.ನಾರಾಯಣ ನಾಯ್ಕ, ಎಂ.ಸಿ.ಬಾಲಗಂಗಾಧರ, ಸೀತಾನಂದ ಬೇರ್ಪಡ್ಕ, ಜಿ.ಬುದ್ಧ ನಾಯ್ಕ, ಜನಾರ್ದನ ಬಿ.ಕುರುಂಜಿಬಾಗ್ ಅಧ್ಯಕ್ಷರಾಗಿ ಮುನ್ನಡೆಸಿದ್ದು, ಪ್ರಸ್ತುತ ಬಾಲಕೃಷ್ಣ ನಾಯ್ಕ್ ಅಜ್ಜಾವರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹಾಸಭೆಯ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದು, ಹಲವು ವರ್ಷಗಳಿಂದ ಸಮಾಜದ ಶ್ರೇಯಸ್ಸಿಗಾಗಿ ಸತ್ಯನಾರಾಯಣ ಪೂಜೆ ಮಾಡಿ ಕೊಂಡು ಬರುತ್ತಿದ್ದೇವೆ. ಸಮಾಜದ ಅಶಕ್ತರಿಗೆ ಆರ್ಥಿಕ ನೆರವು ನೀಡುತ್ತಾ ಅಂತವರಿಗೆ ನೆರವಾಗಿರುತ್ತೇವೆ.
ಸಮಾಜದ ವತಿಯಿಂದ ವಾರ್ಷಿಕ ಮಹಾಸಭೆ, ವಾರ್ಷಿಕ ಕ್ರೀಡಾಕೂಟ ಮತ್ತು ವಾರ್ಷಿಕೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದು ವಿವರಿಸಿದರು.ಮರಾಟಿ ಸಮಾಜ ಸೇವಾ ಸಂಘದ ಆಡಳಿತದಲ್ಲಿ ಗಿರಿದರ್ಶಿನಿ ಕಲಾ ಮಂದಿರ ಕಾರ್ಯನಿರ್ವಹಿಸುತ್ತಿದೆ. ಅದಲ್ಲದೆ ಮಹಮ್ಮಾಯಿ ಸಭಾಭವನವೆಂಬ ಮಿನಿ ಸಭಾಂಗಣ ಕೂಡ ಜನರ ಕಾರ್ಯಕ್ರಮಕ್ಕೆ ಅನುಕೂಲವಾಗಿದೆ.
ಮರಾಟಿ ಸಮಾಜ ಸೇವಾ ಸಂಘದೊಂದಿಗೆ ಮರಾಟಿ ಮಹಿಳಾ ವೇದಿಕೆ ಮತ್ತು ಮರಾಟಿ ಯುವ ವೇದಿಕೆ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬಂದಿರುತ್ತಾರೆ ಎಂದು ಬಾಲಕೃಷ್ಣ ನಾಯ್ಕ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಕೋಶಾಧಿಕಾರಿ ಐತ್ತಪ್ಪ ನಾಯ್ಕ,ಉಪಾಧ್ಯಕ್ಷೆ ಸುಲೋಚನಾ ಕುರುಂಜಿಗುಡ್ಡೆ, ಪದಾಧಿಕಾರಿಗಳಾದ ಜನಾರ್ಧನ ನಾಯ್ಕ್ ಕೇರ್ಪಳ, ಈಶ್ವರ ವಾರಣಾಶಿ, ಜಗದೀಶ್ ಅರಂಬೂರು, ಭವಾನಿಶಂಕರ ಕಲ್ಮಡ್ಕ,ಮಹಿಳಾ ವೇದಿಕೆ ಅಧ್ಯಕ್ಷೆ ರೇವತಿ ದೊಡ್ಡೇರಿ, ಉಪಾಧ್ಯಕ್ಷೆ ಮೀನಾಕ್ಷಿ ಭಸ್ಮಡ್ಕ ಉಪಸ್ಥಿತರಿದ್ದರು.