ಸುಬ್ರಹ್ಮಣ್ಯ:ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಿಲ್ದಾಣದ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಾಯೋಗಿಕ ಸಂಚಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.ಸಕಲೇಶಪುರ ರೈಲು ನಿಲ್ದಾಣದಲ್ಲಿ 20 ಬೋಗಿಗಳ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಯಿತು.
ಬೆಳಿಗ್ಗೆ 6.42ಕ್ಕೆ ಸಕಲೇಶಪುರ ರೈಲು ನಿಲ್ದಾಣದಿಂದ ಆರಂಭವಾದ
ಪ್ರಾಯೋಗಿಕ ಸಂಚಾರ ಬೆಳಿಗ್ಗೆ 10.55ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪಿತು.ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಕಡಿದಾದ ಏರು,ಇಳಿಜಾರು, ತಿರುವು ಹಾಗೂ ಸುಮಾರು 57 ಸುರಂಗಗಳಿವೆ. ಈ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಸಂಚಾರದ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಪರಿಶೀಲಿಸಲು ಒಂದು ವಾರ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ.ಸಕಲೇಶಪುರದಿಂದ ಬೆಳಿಗ್ಗೆ 6.42ಕ್ಕೆ ಆರಂಭವಾಗುವ
ಸಂಚಾರ ಸುಬ್ರಹ್ಮಣ್ಯ ರೋಡ್ ನಿಲ್ದಾಣದಿಂದ ಮಧ್ಯಾಹ್ನ 3ಕ್ಕೆ ಸಕಲೇಶಪುರದತ್ತ ರೈಲು ಮರಳುವಂತೆ ವೇಳಾಪಟ್ಟಿ ರೂಪಿಸಲಾಗಿದೆ. ಒಟ್ಟು ಆರು ಹಂತಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದ್ದು ಸಂಚಾರದ ವೇಳೆ ಕಂಡುಬರುವ ತಾಂತ್ರಿಕ ಸಮಸ್ಯೆ ಗುರುತಿಸಿ ಪರಿಹರಿಸುವ ಉದ್ದೇಶ ಹೊಂದಲಾಗಿದೆ.ಆಗಸ್ಟ್ 20ರವರೆಗೆ ಪುನರಾವರ್ತಿತ ಪ್ರಾಯೋಗಿಕ ಪರೀಕ್ಷೆ ನಿಗದಿಪಡಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾಗಿ ಪೂರ್ಣಗೊಂಡರೆ, ಬೆಂಗಳೂರು-ಮಂಗಳೂರು, ಕರಾವಳಿ ಕರ್ನಾಟಕ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಗೆ ದಾರಿ ಸುಗಮವಾಗಲಿದೆ.





































