ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರುಕಳಿಸುವಂತೆ ಶ್ರಮಿಸುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.ಗುರುವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ (ಕಾಂಗ್ರೆಸ್ ಭವನ) ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ
ನಿರ್ಗಮಿತ ಅಧ್ಯಕ್ಷ ಹರೀಶ್ ಕುಮಾರ್ ಅವರಿಂದ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿದರು.ಕಾಂಗ್ರೆಸ್ ಪಕ್ಷವೆಂದರೆ ಕೇವಲ ರಾಜಕೀಯ ಶಕ್ತಿಯಲ್ಲ, ಅದು ಕೋಟ್ಯಂತರ ಸಾಮಾನ್ಯ ಜನರ ಆಶಯಗಳಿಗೆ ಧ್ವನಿಯಾಗಿರುವ ಮಹಾನ್ ಚಳವಳಿ. ಜನರ ಮುಂದಿನ ಆಶಾಭಾವನೆಯೇ ಕಾಂಗ್ರೆಸ್ ಆಗಿದ್ದು, ಬೂತ್ ಮಟ್ಟದಿಂದ ಪಕ್ಷವನ್ನು ಮರುಸಂಘಟಿಸಲಾಗುವುದು. ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷದ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಕಾರ್ಯಕರ್ತರ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಮುಂದಿನ 8 ದಿನಗಳಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಬೂತ್ಗಳಿಗೆ ಖುದ್ದಾಗಿ ಭೇಟಿ ನೀಡಿ, ಬೂತ್ ಅಧ್ಯಕ್ಷರು ಹಾಗೂ ಸ್ಥಳೀಯ ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗಿ ಅವರ ಶ್ರಮವನ್ನು ಗುರುತಿಸಿ ಬೆನ್ನಿಗೆ ನಿಲ್ಲಲಿದ್ದೇನೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ ಸೂಕ್ತ ವೇದಿಕೆ ಕಲ್ಪಿಸಲು ನವೆಂಬರ್ ಮೊದಲ ವಾರದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.
ನಿರ್ಗಮಿತ ಅಧ್ಯಕ್ಷ ಹರೀಶ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಮ್ಮಾನಿಸಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,
ನೂತನ ಅಧ್ಯಕ್ಷರಿಗೆ ಪಕ್ಷದ ಧ್ವಜ ಹಸ್ತಾಂತರಿಸಿದರು.
ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಫಾ.ಗೋಮ್ಸ್ ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪ್ರಮುಖ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಟಿ.ಎಂ. ಶಾಹೀದ್ ತೆಕ್ಕಿಲ್, ಸದಾನಂದ ಮಾವಜಿ, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಅಪ್ಪಿ, ಶಶಿಧರ ಹೆಗ್ಡೆ, ಅಶ್ರಫ್ ಕೆ., ಸುರೇಶ್ ಬಲ್ಲಾಳ್,ಜಿ.ಕೃಷ್ಣಪ್ಪ, ಎಂ.ಎಸ್. ಮೊಹಮ್ಮದ್, ಸದಾಶಿವ ಉಳ್ಳಾಲ್, ಉಷಾ ಅಂಚನ್, ಶಾಹುಲ್ ಹಮೀದ್, ಈಶ್ವರ್ ಉಳ್ಳಾಲ್, ಮಹಮ್ಮದ್ ಆಲಿ, ಜೋಕಿಂ, ನವಾಝ್, ಎ.ಸಿ. ಭಂಡಾರಿ, ಲಾವಣ್ಯ ಬಲ್ಲಾಳ್, ಯು.ಕೆ. ಮೋನು ಮೊದಲಾದ ನಾಯಕರು ಉಪಸ್ಥಿತರಿದ್ದರು.







