ಸುಳ್ಯ:ಸುಳ್ಯದ ರಂಗಮಯೂರಿ ಕಲಾಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ, ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಕಸಿತ ಭಾರತದ ಕಡೆ ಮಕ್ಕಳ ನಡೆ ಎಂಬ ಧೈಯದೊಂದಿಗೆ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಸಂಕಲ್ಪ ಮಕ್ಕಳ ಹಬ್ಬ – 2026 ಅ.9ರಿಂದ 11ರವರೆಗೆ ಮೂರು ದಿನಗಳ ಕಾಲ ಸುಳ್ಯದ ಅಮರಶ್ರೀಭಾಗ್ನ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ ಎಂದು
ಕಾರ್ಯಕ್ರಮದ ಸಂಯೋಜಕರು ಹಾಗು ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ತಾಲೂಕು ಹಾಗೂ ಸುಳ್ಯ ತಾಲೂಕಿಗೆ ಹೊಂದಿಕೊಂಡಿರುವ ಗಡಿ ಗ್ರಾಮಗಳ ಎಲ್ಲಾ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶದಿಂದ ಮಕ್ಕಳ ಹಬ್ಬ ಆಯೋಜನೆಗೊಂಡಿದ್ದು ಎಲ್ಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ಅವಕಾಶವಿದೆ.
ಕಾರ್ಯಕ್ರಮದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಮತ್ತು ವರ್ತಮಾನಕ್ಕೆ ಅನುಗುಣವಾಗಿ ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಗುಣ ಮಟ್ಟದ ವಿಚಾರ ಸಂಕೀರ್ಣ, ಮಾರ್ಗದರ್ಶನ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ – ಸಾಹಿತ್ಯ ಸ್ಪರ್ಧೆಗಳು, ವೇದಿಕೆ ಪ್ರದರ್ಶನಗಳು, ವಿಚಾರ ಗೋಷ್ಠಿಗಳು ನಡೆಯಲಿದೆ. ಮನೆಗೊಂದು ಗಿಡ ಪರಿಸರ ಜಾಗೃತಿ, ಮಕ್ಕಳ ಆರೋಗ್ಯಕರ ಆಹಾರ ಮೇಳ, ಪುಸ್ತಕ ಮೇಳ, ಹೂ – ಹಣ್ಣಿನ ಗಿಡಗಳ ಮಾರಾಟ ಮಳಿಗೆ, ಆರೋಗ್ಯ ತಪಾಸಣಾ ಶಿಬಿರ, ಮಕ್ಕಳ ಆಧಾರ್ ತಿದ್ದುಪಡಿ ಮತ್ತು ನೋಂದಣಿ, ಉಳಿತಾಯ ಜಾಗೃತಿಗಾಗಿ ಬ್ಯಾಂಕಿಂಗ್ ಸೇವಾ ಮಾಹಿತಿ, ಮಾವು, ಹಲಸು, ಅನನಾಸು ಹಣ್ಣಿನ ಹೋಳಿಗೆ ಸ್ಥಳದಲ್ಲೇ ತಯಾರಿ, ಪೋಷಕರಿಗಾಗಿ ವಿನೂತನ

ಮಾಹಿತಿ ಕಾರ್ಯಾಗಾರ ಮಾತೃ ಸಂಗಮ ನಡೆಯಲಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯಲಿದೆ. ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಆಧುನಿಕ ತಾರಾಲಯ ಪ್ರದರ್ಶನಗಳು, ಕೃತಕ ಬುದ್ದಿಮತ್ತೆಯ ಯಾಂತ್ರಿಕ ಮಾನವ ಮತ್ತು ಶ್ವಾನ ಚಟುವಟಿಕೆಗಳು, ವರ್ಚುವಲ್ ರಿಯಾಲಿಟಿ ಶೋ ಜೊತೆಗೆ ಪಾರಂಪರಿಕ ವಸ್ತುಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಎಲ್ಕೆಜಿಯಿಂದ ದ್ವಿತೀಯ
ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು ಜೊತೆಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. 3 ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಅಂದಾಜು 10ರಿಂದ 12ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.ಎಂದು ಅವರು ವಿವರಿಸಿದರು.
ಅ.9ರಂದು ಪೂ.10.30ಕ್ಕೆ ನಡೆಯುವ ಸಮಾರಂಭದಲ್ಲಿ ಖ್ಯಾತ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಮಕ್ಕಳ ಹಬ್ಬವನ್ನು ಉದ್ಘಾಟಿಸುವರು. ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ ಅಧ್ಯಕ್ಷತೆ ವಹಿಸುವರು. ಅ.11ರಂದು ಸಂಜೆ.4.30ರಿಂದ ನಡೆಯುವ ಸಮಾರೋಪ ಸಮಾರಂಭದ

ಅಧ್ಯಕ್ಷತೆಯನ್ನು ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಪ್ರಸಾದ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಫರೀದ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಶಾಸಕಿ ಭಾಗೀರಥಿ ಮುರುಳ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಡಾ.ಕೆ.ವಿ.ಚಿದಾನಂದ, ಎಸ್.ಆರ್.ಸತೀಶ್ಚಂದ್ರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಲೋಕೇಶ್ ಊರುಬೈಲು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಪ್ರಚಾರ ಸಮಿತಿಯ ಸಂಚಾಲಕ ಹರೀಶ್ ಬಂಟ್ವಾಳ್, ಕಾರ್ಯಕ್ರಮದ ಸಂಯೋಜಕರಾದ ರಂಜಿತ್ ಅಡ್ತಲೆ, ಯಶ್ವಿತ್ ಕಾಳಮ್ಮನೆ, ಸಭಾ ನಿರ್ವಹಣೆಯ ಸಂಚಾಲಕರಾದ ವೀರಪ್ಪ ಗೌಡ ಕಣ್ಕಲ್, ಸಾಂಸ್ಕೃತಿಕ ಮತ್ತು ಸ್ಪರ್ಧಾ ಸಮಿತಿಯ ಸಂಚಾಲಕ ಶಿವಪ್ರಸಾದ್ ಆಲೆಟ್ಟಿ, ನವರಾಜ್ ಕಿರ್ಲಾಯ ಉಪಸ್ಥಿತರಿದ್ದರು.








