ಸುಳ್ಯ:ಸುಳ್ಯ ನಗರದ ಹಳೆಗೇಟು ಕೊಡಿಯಾಲಬೈಲು ರಸ್ತೆಯು ಸಂಪೂರ್ಣ ನಾದುರಸ್ತಿಯಲ್ಲಿದ್ದು ಸಂಚಾರಕ್ಕೆ ದುಸ್ತರವಾಗಿರುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಸಚಿವಾಲಯ ನಿರ್ದೇಶನ ನೀಡಿದೆ.ರಸ್ತೆಯ ಅವ್ಯವಸ್ಥೆಯ ಬಗ್ಗೆ ‘ಸುಳ್ಯ ಮಿರರ್ ವೆಬ್ಸೈಟ್ ಸೇರಿ
ಮಾಧ್ಯಮಗಳಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು. ನಗರದಲ್ಲಿಯೇ ಇದ್ದರೂ ಸುಂದರ ಪ್ರಕೃತಿಯ ಮಧ್ಯೆ ಹಾದು ಹೋಗುವ ರಸ್ತೆ. ಆದರೆ ಈ ರಸ್ತೆಯ ಪ್ರಯಾಣ ಮಾತ್ರ ಅಷ್ಟೇನು ಸುಂದರ ಮತ್ತು ಸುಖಕರವಾಗಿಲ್ಲ..ಇದು ಸುಳ್ಯದ ಬಹು ಉಪಯೋಗಿ ಹಳೆಗೇಟು- ಕೊಡಿಯಾಲಬೈಲು ರಸ್ತೆ. ಕಳೆದ 25 ವರ್ಷಗಳಿಂದ ಅಭಿವೃದ್ಧಿ, ಡಾಂಬರು, ಕಾಣದ ರಸ್ತೆ ಎಕ್ಕುಟ್ಟಿ ಹೋಗಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಲ್ಲಿ ಆಳೆತ್ತರದ ಹೊಂಡ ಗುಂಡಿ ನಿರ್ಮಾಣವಾಗಿರುವ ರಸ್ತೆಯ ಸ್ಥಿತಿ ಅಯೋಮಯವಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಮಾಧ್ಯಮ ವರದಿಯ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯದ ನಿರ್ದೇಶನದ ಮೇರೆಗೆ

ಎಚ್ಚೆತ್ತುಕೊಂಡಿರುವ ಸುಳ್ಯ ನಗರ ಪಂಚಾಯತ್ ರಸ್ತೆಯಲ್ಲಿ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ. ರಸ್ತೆಯ ಸ್ಥಿತಿಯನ್ನು ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ಕೈಗೊಂಡು ಪಾಲನಾ ವರದಿ ನೀಡುವಂತೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.ಈ ಹಿನ್ನಲೆಯಲ್ಲಿ ರಸ್ತೆಯ ಹೊಂಡವನ್ನು ಜಲ್ಲಿ ಕಲ್ಲು ಹಾಕಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ರಸ್ತೆಯನ್ನು ನಗರೋತ್ಥಾನ ಹಂತ-5ರ ಯೋಜನೆಯಡಿ ಅಭಿವೃದ್ಧಿಗೆ ಪರಿಗಣಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ವರದಿ ಸಲ್ಲಿಸಿದ್ದಾರೆ.
ಹಳೆಗೇಟು ಹೊಸಗದ್ದೆ ಕಟ್ಟೆ ಬಳಿಯಿಂದ ಕೊಡಿಯಾಲಬೈಲು- ದುಗ್ಗಲಡ್ಕ ರಸ್ತೆಗೆ ಸಂಧಿಸುವ ರಸ್ತೆ ಸುಮಾರು 2.5 ಕಿ.ಮಿ.ದೂರ ಇದೆ. ಅಗಲ ಕಿರಿದಾದ ಈ ರಸ್ತೆಯಲ್ಲಿ ವಿವಿಧ ಕಡೆಗಳಲ್ಲಿ ಭಾರೀ ಗಾತ್ರದ ಹೊಂಡಗಳೇ ತುಂಬಿದೆ. ಈ ರಸ್ತೆಯನ್ನು ಅಭಿವೃದ್ಧಿ ಮಾಡಿ ಸರ್ವ ಋತು ರಸ್ತೆಯಾಗಿಸಬೇಕು ಎಂಬುದು ಈ ಭಾಗದ ಜನರ ಒಕ್ಕೊರಲ ಬೇಡಿಕೆ.







