ಸುಳ್ಯ:ಸುಳ್ಯ ತಾಲೂಕಿನ ಜಾಲ್ಸೂರು ಕೆಮ್ಮನಬಳ್ಳಿ ಮೂಲದ ಹಿರಿಯ ಸಂಸ್ಕೃತ ವಿದ್ವಾಂಸ ಪ್ರೊ.ಕೆ.ಗಣಪತಿ ಭಟ್ ಅವರನ್ನು ತಿರುಪತಿಯ ಶ್ರೀ ವೆಂಕಟೇಶ್ವರ ವೇದಿಕ್ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಮಾಡಲಾಗಿದೆ.ಅದ್ವೈತ ವೇದಾಂತದ ಪ್ರಾಧ್ಯಾಪಕರಾಗಿ, ವೇದ ಶಾಸ್ತ್ರಗಳ ಅಧ್ಯಯನ ಮತ್ತು ಬೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಅವರಿಗೆ ಈ ಮಹತ್ವದ ಜವಾಬ್ದಾರಿಯನ್ನು ನೀಡಿ ಆಂಧ್ರ ಪ್ರದೇಶದ
ರಾಜ್ಯಪಾಲ ಹಾಗೂ ವಿವಿಯ ಕುಲಾಧಿಪತಿ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಆದೇಶ ಹೊರಡಿಸಿದ್ದಾರೆ.
ಕಾಂಚಿ ಕಾಮಕೋಟಿ ವಿದ್ಯಾಪೀಠದಲ್ಲಿ ವೇದಾಧ್ಯಯನ ಮಾಡಿರುವ ಅವರು 1993ರಲ್ಲಿ ಕಾಲಡಿಯ ಶ್ರೀ ಶಂಕರಾಚಾರ್ಯ ವಿದ್ಯಾಪೀಠದಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನ ಆರಂಭಸಿದ್ದರು. ಬಳಿಕ
ತಿರುಪತಿಯ ಶ್ರೀ ವೆಂಕಟೇಶ್ವರ ವೇದಿಕ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರ್ಪಡೆಗೊಂಡಿದ್ದು, ಕಳೆದ 32 ವರ್ಷಗಳಿಂದ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ಸಂಸ್ಕೃತದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದರು.ಮುಂದಿನ ಮೂರು ವರ್ಷದ ಅವಧಿಗೆ ಅವರು ಶ್ರೀ ವೆಂಕಟೇಶ್ವರ ವೇದಿಕ್ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಅವರು ಸುಳ್ಯ ತಾಲೂಕಿನ ಕೆಮ್ಮನಬಳ್ಳಿ ದಿ.ಗೋಪಾಲಕೃಷ್ಣ ಭಟ್- ಶಾರದಾ ದಂಪತಿ ಪುತ್ರ.








