ಸುಳ್ಯ: ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ ಸಂಭ್ರಮ.ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಪ್ರಯುಕ್ತ
ಮೇ 2ರಂದು ಬೆಳಗ್ಗೆ ದೇವರ ದರ್ಶನಬಲಿ ಉತ್ಸವ, ರಾಜಾಂಗಣ ಪ್ರಸಾದ ಹಾಗೂ ಮಂತ್ರಾಕ್ಷತೆ ನಡೆಯಿತು.ಮೇ.1ರಂದು ಸಂಜೆ
ಉಳ್ಳಾಕುಲು ಮೂಲಸ್ಥಾನ ಕಳೇರಿಯಿಂದ ಭಂಡಾರ ತರಲಾಯಿತು. ನಂತರ ಭೂತಬಲಿ ಉತ್ಸವ, ಬಲಿಕಟ್ಟೆ ಪೂಜೆ, ವಸಂತೋತ್ಸವ, ಬೆಡಿ ಉತ್ಸವ ಹಾಗೂ ನೃತ್ಯ ಬಲಿ ಉತ್ಸವ ನಡೆಯಿತು.

ನಾಳೆ ಉಳ್ಳಾಕುಲು ನೇಮೋತ್ಸವ, ಅಡ್ಡಣಪೆಟ್ಟು:
ಮೇ 3ರಂದು ಬೆಳಗ್ಗೆ 9 ಕ್ಕೆ ಉಳ್ಳಾಕುಲು ನೇಮೋತ್ಸವ ನಡೆಯಲಿದ್ದು ಧಾರ್ಮಿಕ ಮಹತ್ವದ ಅಡ್ಡಣಪೆಟ್ಟು ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30 ರಿಂದ ಉದ್ರಾಂಡಿ ಹಾಗೂ ಉಪದೈವಗಳ ಕೋಲ ನಡೆಯಲಿದೆ. ಸಂಜೆ 4 ಕ್ಕೆ ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತಂದ ಬಳಿಕ ವಿಷ್ಣುಮೂರ್ತಿ ದೈವದ ತೊಡಂಙಲ್ ನಡೆಯಲಿದೆ. ಮೇ 4 ರಂದು ಬೆಳಗ್ಗೆ 10 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ನಡಾವಳಿ ನಡೆದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಹಾಗೂ ವೇದಮೂರ್ತಿ ಕುಂಟಾರು ರವೀಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಅನಂತಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಜಾತ್ರೋತ್ಸವ ಕಾರ್ಯಕ್ರಮ ನಡೆಯುತಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ದೇಗುಲದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪುಂಡರೀಕ ಹೆಬ್ಬಾರ್, ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ, ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.