ಸುಳ್ಯ:ಮಲೆನಾಡು ಗಿಡ್ಡ ದೇಶೀಯ ತಳಿ ಹಸುವಿನ ಹಾಲು ಅಮೃತ ಇದ್ದಂತೆ. ನಮ್ಮ ಆರೋಗ್ಯ ಮತ್ತು ಕೃಷಿ ಬದುಕು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಮಲೆನಾಡು ಗಿಡ್ಡ ದನವನ್ನು ಸಾಕಿ ಬೆಳೆಸಬೇಕು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಹೇಳಿದ್ದಾರೆ. ಮೇ.25ರಂದು ಸುಳ್ಯ ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್ನಲ್ಲಿ ನಡೆದ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ಮತ್ತು
ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ವೆಬ್ಸೈಟ್ ಅನಾವರಣ, ಗೋಪೂಜೆ ಮತ್ತು ಗೋವುಗಳ ಸಂರಕ್ಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ ಮತ್ತು ಹಳೆಯ ಜೀವನ ಪದ್ಧತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶೀಯ ಗೋ ತಳಿಗಳನ್ನು ಸಂರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು. ಮುದ್ದಿನ ಸಾಕು ಪ್ರಾಣಿಗಳ ಪಟ್ಟಿಗೆ ಮಲೆನಾಡು ಗಿಡ್ಡ ಸೇರಿ ಪ್ರತಿ ಮನೆಯಲ್ಲಿ ಪ್ರೀತಿಯಿಂದ ಬೆಳೆಸುವಂತಾಗಬೇಕು. ಅದಕ್ಕೆ ಬೇಕಾದ ಮೇವು ಮತ್ತಿತರ ಅವಶ್ಯಕತೆಗಳು ಪೂರೈಸುವಂತಾಗಬೇಕು ಎಂದು ಅವರು ಹೇಳಿದರು.

ಸಾವಯವ ಕೃಷಿ ಕ್ರಾಂತಿ:
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಸಂಘಟಕರಾದ ಅಕ್ಷಯ್ ಆಳ್ವ ‘ ಕಳೆದ ಮೂರು ವರ್ಷಗಳಿಂದ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದಿಂದ ಸಾವಯವ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಸಾಧ್ಯವಾಗಿದೆ. ನಿಜವಾದ ಗೋ ಸಂರಕ್ಷಣೆಯ ಉದ್ದೇಶದಿಂದ 2500 ಕ್ಕೂ ಅಧಿಕ ಸಾವಯವ ಕೃಷಿಕರಿಗೆ ಮಲೆನಾಡು ಗಿಡ್ಡ ಒಂದು ಗಂಡು ಮತ್ತು ಒಂದು ಹೆಣ್ಣು ಕರುಗಳನ್ನು ವಿತರಿಸಿದ್ದೇವೆ. ಸಾವಿರಾರು ಮಂದಿಯಿಂದ ಬೇಡಿಕೆ ಇದೆ. ಆದರೆ ಗೋ ತಳಿಗಳನ್ನು ಸಂರಕ್ಷಣೆ ಮಾಡುವ ಆಯ್ದ ಕೃಷಿಕರಿಗೆ ಇದನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ಗೋವುಗಳ ವಿತರಣೆಯ ಬಳಿಕ ಸಾವಯವ ಕೃಷಿಗೆ ಹೆಚ್ಚು ಪ್ರೋತ್ಸಾಹ ದೊರಕಿದೆ.ಅವನತಿಯತ್ತ ಸಾಗುವ ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆ ರೈತರಿಂದ ಮಾತ್ರ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ವೆಬ್ಸೈಟ್ ಲೋಕಾರ್ಪಣೆ ಮಾಡಿದರು.ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಅಧ್ಯಕ್ಷರಾದ ಸದಾಶಿವ ಭಟ್ ಮರಿಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎನ್ಡಿಆರ್ಐ(ನ್ಯಾಷನಲ್ ಡೈರಿ ಸಂಶೋಧನಾ ಸಂಸ್ಥೆ) ಬೆಂಗಳೂರು ಇದರ ಫಾರ್ಮರ್ ಹೆಡ್ ಡಾ.ಕೆ.ಪಿ.ರಮೇಶ್, ಮಾಜಿ ಸಚಿವರಾದ ಎಸ್. ಅಂಗಾರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಜಿಕೆವಿಕೆ ಬೆಂಗಳೂರು ಇಲ್ಲಿನ ವಿಶ್ರಾಂತ ಉಪಕುಲಪತಿ ಡಾ.ವಿಶ್ವನಾಥ್,ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪುರುಷೋತ್ತಮ ಕೆ.ಜಿ ಭಾಗವಹಿಸಿದ್ದರು. ದೀಪ್ತಿ, ವೈಶಾಲಿ ಹಾಗೂ ಪ್ರಸನ್ನ ಪ್ರಾರ್ಥಿಸಿದರು. ಕೆವಿಜಿ ಆಯುರ್ವೇದ ಕಾಲೇಜಿನ ಉಪನ್ಯಾಸಕಿ ಡಾ.ಹರ್ಷಿತಾ ಪುರುಷೋತ್ತಮ ಸ್ವಾಗತಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ
ಎನ್ಡಿಆರ್ಐ(ನ್ಯಾಷನಲ್ ಡೈರಿ ಸಂಶೋಧನಾ ಸಂಸ್ಥೆ) ಬೆಂಗಳೂರು ಇದರ ಫಾರ್ಮರ್ ಹೆಡ್ ಡಾ.ಕೆ.ಪಿ.ರಮೇಶ್ ಹಾಗೂ ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪುರುಷೋತ್ತಮ ಕೆ.ಜಿ ಅವರು ಮಲೆನಾಡು ಗಿಡ್ಡ ತಳಿಯ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ, ಗೋ ಪೂಜೆ, ಗೋವುಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಗೌವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿತ್ತು.