ಸುಳ್ಯ:ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 25ನೇ ವರ್ಷದ ಶ್ರೀ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರ ಎ.20ರಿಂದ ಸುಳ್ಯದ ಖಾಸಗೀ ಬಸ್ ನಿಲ್ದಾಣದ ಬಳಿಯ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿದೆ ಒಂದು ತಿಂಗಳ ಕಾಲ ನಡೆಯುವ ಉಚಿತ ಶಿಬಿರದಲ್ಲಿ ವೇದದ ಜೊತೆಗೆ ಯೋಗ, ಯಕ್ಷಗಾನ, ಕಂಸಾಳೆ – ವೀರಗಾಸೆಯಂತಹ ಜಾನಪದ ಕಲೆಗಳು, ಭಜನೆ – ಸಂಗೀತ, ಜಾನಪದ ನೃತ್ಯ ಮುಂತಾದ
ಲಲಿತಕಲೆಗಳು, ಪೇಪರ್ ಕಟ್ಟಿಂಗ್, ಚಿತ್ರಕಲೆ, ನಾಟಕ, ಮಿಮಿಕ್ರಿ ಮುಂತಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಗುತ್ತದೆ.
ಈಜು ತರಬೇತಿಯನ್ನು ನೀಡಲಾಗುತ್ತದೆ. ಹಿಂದೂ ಧರ್ಮದ ನಂಬಿಕೆಗಳು ಮತ್ತು ಆಚರಣೆಗಳ ಹೊಂದಿರುವ ವೈಜ್ಞಾನಿಕ ಕಾರಣಗಳು, ಭಗವದ್ಗೀತೆ, ಲಲಿತಾ ಸಹಸ್ರನಾಮ, ವಿಷ್ಣುಸಹಸ್ರನಾಮ ಮುಂತಾದ ಶ್ಲೋಕಗಳನ್ನು ಸ್ಪುಟವಾಗಿ ಪಠಿಸುವ ಸಾಂಪ್ರದಾಯಿಕ ವಿಧಾನ. ಸುಭಾಷಿತಗಳು, ಆದರ್ಶ ದಿನಚರಿ ರೂಪಿಸಿಕೊಳ್ಳುವ ಬಗೆ. ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಕಲಿಸಲಾಗುತ್ತದೆ. ರಾಜ್ಯ ಹಾಗೂ ಹೊರರಾಜ್ಯದ ಆಯ್ಕೆಯಾದ 200 ಶಿಬಿರಾರ್ಥಿಗಳಿಗೆ ವೇದ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯಪುಸ್ತಕಗಳು, ವ್ಯಾಸಪೀಠ ಇತ್ಯಾದಿಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಏ. 20ರಂದು ಬೆಳಗ್ಗೆ 10.30ಕ್ಕೆ ಶಿಬಿರವನ್ನು ವೇದ ವಿದ್ವಾಂಸರಾದ ವೇದ ಬ್ರಹ್ಮ ಕೇಶವ ಜೋಯಿಸ ವಳಲಂಬೆ ಇವರು ಉದ್ಘಾಟಿಸಲಿದ್ದಾರೆ. ಪುತ್ತೂರಿನ ವಕೀಲರಾದ ಮಹೇಶ ಕಜೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ದಿಕ್ಕೂಚಿ ಉಪನ್ಯಾಸ ಮಾಡಲಿದ್ದು, ಪ್ರಗತಿಪರ ಕೃಷಿಕ ರವಿಶಂಕರ ರಾವ್ ದೇವ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಶ್ರೀ ಕೇಶವಕೃಪ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿರುವರು ಎಂದು ಎಂದು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ.