ಕೇರ್ಪಡ: ತಂತ್ರಜ್ಞಾನದ ಜೊತೆಗೆ ತತ್ವಜ್ಞಾನವೂ ಇದ್ದರೆ ಮಾತ್ರ ಮಾನವನ ಬದುಕು ಹಸನಾಗಲು ಸಾಧ್ಯ ಎಂದು ಶ್ರೀಕ್ಷೇತ್ರ ಒಡಿಯೂರಿನ ಶ್ರೀಗುರು ದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ
ಹೇಳಿದರು.ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಧರ್ಮ ಶಿಕ್ಷಣದ ಕೊರತೆಯಿಂದ ಸಮಾಜದಲ್ಲಿ ಇಂದು
ವ್ಯತ್ಯಾಸ ಆಗುತ್ತಾ ಇದೆ. ಆದುದರಿಂದ ಬದುಕಿಗೆ ಧರ್ಮಶಿಕ್ಷಣ ಅತೀ ಅಗತ್ಯ. ಧರ್ಮ ಶಿಕ್ಷಣ ದೊರೆಯದೇ ಇದ್ದಲ್ಲಿ ಬದುಕಿನಲ್ಲಿ ತೃಪ್ತಿ, ಧರ್ಮದ ಅನುಷ್ಠಾನ ಆಗದಿದ್ದರೆ ಶಾಂತಿ ಸಿಗುವುದಿಲ್ಲ. ನಮ್ಮ ನಡೆ ಮತ್ತು ನುಡಿ ಒಂದಾದರೆ ಧರ್ಮದ ಅನುಷ್ಠಾನ ಸಾಧ್ಯ ಎಂದು ಅವರು ಹೇಳಿದರು.
‘ಭಾರತೀಯ ಕುಟುಂಬ ಪದ್ಧತಿಯ ವೈಶಿಷ್ಟ್ಯಗಳು’ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಭಾರತದ ಕುಟುಂಬ ಪದ್ಧತಿ ವೈಶಿಷ್ಟ್ಯವಾದುದು. ಎಲ್ಲವನ್ನೂ ಒಳಗೊಳ್ಳುವ ವಿಶಾಲವಾದ ಧರ್ಮ ಹಿಂದೂ ಧರ್ಮ. ಭಾರತದ ಧರ್ಮ ಕೇಂದ್ರಗಳು ನಮ್ಮ ದೇವಸ್ಥಾನಗಳು. ಜೊತೆಗೆ ಧರ್ಮ ನಮ್ಮ ಮನೆಗಳಲ್ಲಿ, ಕುಟುಂಬದಲ್ಲಿ ಇತ್ತು. ಆದುದರಿಂದಲೇ

ಎಷ್ಟೇ ಸವಾಲು ಎದುರಾದರೂ ಧರ್ಮ ಉಳಿದಿದೆ. ತಾಯಿ ಪ್ರತಿ ಕುಟುಂಬದ ಕೇಂದ್ರ ಬಿಂದು.ಆ ತಾಯಿ ನಮ್ಮ ಕುಟುಂಬ, ಸಂಸ್ಕಾರ, ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸಿ ಬೆಳೆಸಿದೆ ಎಂದು ಹೇಳಿದರು. ಧರ್ಮವನ್ನು ಉಳಿಸಬೇಕಾದ ಕುಟುಂಬ ವ್ಯವಸ್ಥೆಯನ್ನು ಪೋಷಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ತಾಯಂದಿರಿಗಿದೆ. ನಮ್ಮ ಧರ್ಮವನ್ನು ಉಳಿಸಬೇಕಾದ ಕೆಲಸ ನಮ್ಮ ಮನೆಗಳಿಂದ ಆಗಬೇಕು ಎಂದು ಅವರು ಹೇಳಿದರು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯದ ಅಟಲ್ ಜಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹರೀಶ್ ಕಂಜಿಪಿಲಿ,
ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ, ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು ಅತಿಥಿಗಳಾಗಿದ್ದರು.

ಮಹಿಷ ಮರ್ದಿನೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯರಾದ ರೂಪರಾಜ ರೈ ಕೆ.ಪಜಿಂಬಿಲ, ಯೋಗಾನಂದ ಉಳ್ಳಲಾಡಿ, ಮಹಿಷ ಮರ್ದಿನೀ ಭಜನಾ ಮಂಡಳಿ ಅಧ್ಯಕ್ಷ ಸುಂದರ ಗೌಡ ಆರೆಂಬಿ, ಸದಸ್ಯ ನಾರಾಯಣ ಎಂಜೀರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ನಡುಬೈಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಷಮರ್ದನಿ ಕಲಾ ಸಂಘದ ಸದಸ್ಯ ಕೀರ್ತನ್ ಬಿ. ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲು ಕಾರ್ಯಕ್ರಮ ನಿರೂಪಿಸಿದರು.