ಸುಳ್ಯ:ಕಾಂಕ್ರೀಟೀಕರಣ ನಡೆದ ಕಾಯರ್ತೋಡಿ ದೇವಸ್ಥಾನದ ಕಡೆಗೆ ತೆರಳುವ ರಸ್ತೆಗೆ ಎರಡು ಬಾರಿ ಉದ್ಘಾಟನಾ ಭಾಗ್ಯ.ಭಾನುವಾರ ಶಾಸಕರ ನೇತೃತ್ವದಲ್ಲಿ ಬಿಜೆಪಿಯವರು ರಸ್ತೆಯನ್ನು ಉದ್ಘಾಟಿಸಿದರೆ, ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮತ್ತಿತರರು ಆಗಮಿಸಿ ಸೋಮವಾರ ಎರಡನೇ ಬಾರಿ ರಸ್ತೆಯ
ಉದ್ಘಾಟನೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಜೂ.15ರಂದು ರಸ್ತೆ ಉದ್ಘಾಟನೆ ಎಂದು ಆಮಂತ್ರಣ ಪೋಸ್ಟರ್ನ್ನು ಎಂ.ವೆಂಕಪ್ಪ ಗೌಡರು ಕೆಲ ದಿನಗಳ ಹಿಂದೆಯೇ ಹಂಚಿದ್ದರು. ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟನೆ ಮಾಡುವುದಾಗಿ ಆಮಂತ್ರಣದಲ್ಲಿ ನಮೂದಿಸಲಾಗಿತ್ತು.

ಈ ಮಧ್ಯೆ ಭಾನುವಾರ ರಸ್ತೆ ಉದ್ಘಾಟನೆ ಎಂದು ಬಿಜೆಪಿ ಪ್ರಮುಖರು ಪೋಸ್ಟರ್ ಹಂಚಿಕೆ ಮಾಡಿ ಸಂಜೆಯ ವೇಳೆಗೆ ಶಾಸಕಿ ಭಾಗೀರಥಿ ಮುರುಳ್ಯ ರಸ್ತೆಯ ಉದ್ಘಾಟನೆ ನೆರವೇರಿಸಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸೇರಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.ಈ ಮಧ್ಯೆ ತಾವು ಮೊದಲೇ ನಿರ್ಧರಿಸಿದಂತೆ

ರಸ್ತೆ ಉದ್ಘಾಟನೆ ನಡೆಸುವುದಾಗಿ ಹೇಳಿ ವೆಂಕಪ್ಪ ಗೌಡರ ನೇತೃತ್ವದಲ್ಲಿ ಸೋಮವಾರ ರಸ್ತೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸೇರಿ ಪ್ರಮುಖರು ಭಾಗವಹಿಸಿದ್ದರು. ರಾಜ್ಯ ಸರಕಾರದ ವಿಶೇಷ ಅನುದಾನದಡಿ
ಶಾಸಕಿ ಭಾಗೀರಥಿ ಮುರುಳ್ಯ ಮೀಅಲಿರಿಸಿದ 20 ಲಕ್ಷ ರೂ ಅನುದಾನ ಮತ್ತು ಸ್ಥಳೀಯ ನಗರ ಪಂಚಾಯತ್ ಮಾಜಿ ಸದಸ್ಯೆ ಪ್ರವಿತಾ ಪ್ರಶಾಂತ್ ನೀಡಿದ ನಾಲ್ಕು ಲಕ್ಷ ರೂ ಅನುದಾನದಲ್ಲಿ ಕಾಯರ್ತೋಡಿ ದೇವಸ್ಥಾನದ ರಸ್ತೆಯ ಕಾಂಕ್ರೀಟೀಕರಣ ನಡೆಸಲಾಗಿತ್ತು. ಅನುದಾನ ಬಿಡುಗಡೆ ಆದ ಸಂದರ್ಭದಲ್ಲಿ ಬ್ಯಾನರ್, ಪ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿಯೂ ಬಿಜೆಪಿ, ಕಾಂಗ್ರೆಸ್ ಮಧ್ಯೆ ಇಲ್ಲಿ ಸ್ಪರ್ಧೆ ಏರ್ಪಟ್ಟಿತು. ಎರಡೂ ಕಡೆಯಿಂದ ಬ್ಯಾನರ್,ಪ್ಲೆಕ್ಸ್ ರಾರಾಜಿಸಿತ್ತು.







