ತಿರುವನಂತಪುರ:ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್ನ್ನು ಹಣಕಾಸು ಖಾತೆಯ ಹೊಣೆಗಾರಿಕೆಯನ್ನು ಹೊಂದಿರುವ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಂದು ವಿಧಾನಸಭೆಯಲ್ಲಿ ಮಂಡಿಸಿದರು.ಕೇರಳವನ್ನು ಹೊಸ ಯುಗದ ಕಡೆಗೆ ಮುನ್ನಡೆಸುವ ಆಶಯದೊಂದಿಗೆ ಹಲವು ಯೋಜನೆಗಳನ್ನು ಮಂಡಿಸಿದ್ದಾರೆ. ಬಜೆಟ್ನಲ್ಲಿ ಮಿಷನ್ ಸಮುದ್ರ ಯೋಜನೆಯನ್ನು
ಘೋಷಿಸಲಾಗಿದೆ. 600 ಕಿ.ಮಿ.ಕರಾವಳಿ, ಎರಡು ಅಂತಾರಾಷ್ಟ್ರೀಯ ಬಂದರು, ಕಂಟೈನರ್ ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್, ಇತರ ಬಂದರು ಹಾಗು ಜಲ ಸಂಪನ್ಮೂಲಗಳನ್ನು ಒಟ್ಟಾಗಿಸಿ 5 ವರ್ಷದಲ್ಲಿ ಕೇರಳವನ್ನು ವಿಶ್ವ ಸಾಗರ ಸಂಬಂಧಿ ವ್ಯವಹಾರಿಕ ಭೂಪಟದಲ್ಲಿ ಗುರುತಿಸುವಂತೆ ಮಾಡುವ ಮಿಷನ್ ಸಮುದ್ರ ಯೋಜನೆಗೆ 400 ಕೋಟಿ ರೂ ಮೀಸಲಿರಿಸಲಾಗಿದೆ. ಜಲಸಾರಿಗೆ, ರಸ್ತೆ ಮತ್ತು ರೈಲ್ವೇಯನ್ನು ಪರಸ್ಪರ ಜೋಡಣೆಯ ಮೂಲಕ ಯೋಜನೆಗೆ ರೂಪು ನೀಡಲಾಗಿದೆ.
ರಾಜ್ಯದ ಕಾಸರಗೋಡು, ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಇರುವ ವಿಶೇಷ ಪ್ಯಾಕೇಜನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು.
ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಅರ್ಹರಾದ ಎಲ್ಲಾ ಸವಲತ್ತುಗಳನ್ನ್ನು ಒದಗಿಸಿ ಸಂರಕ್ಷಣೆ ನೀಡಲಾಗುವುದು ಎಂದು ಬಜೆಟ್ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ.
ರಬ್ಬರ್ ಬೆಂಬಲ ಬೆಲೆಯನ್ನು ಕೆಜಿಗೆ 200ರಿಂದ 250ಕ್ಕೆ ಏರಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಗೆ 1,422 ಕೋಟಿ ರೂ., ಕೃಷಿ ವಲಯಕ್ಕೆ 1534 ಕೋಟಿ, ಕ್ರೀಡೆ ಮತ್ತು ಯುವಜನ ವಲಯಕ್ಕೆ 175.77 ಕೋಟಿ ರೂ., ಹೈನುಗಾರಿಕಾ ಅಭಿವೃದ್ಧಿ ವಲಯಕ್ಕೆ 102 ಕೋಟಿ ರೂ.ವನ್ನು ಬಜೆಟ್ನಲ್ಲಿ ಮೀಸಲಿರಿಸಲಾಗಿದೆ.
ಕೇರಳವನ್ನು ಏಷ್ಯಾದ ಪ್ರಧಾನ ಏವಿಯೇಶನ್ ಹಬ್ ಆಗಿ ಬದಲಾಯಿಸಲು 200 ಕೋಟಿ ಮೀಸಲಿರಿಸಲಾಗಿದೆ. ಉಮ್ಮನ್ ಚಾಂಡಿ ಆರೋಗ್ಯ ವಿಮೆ ಯೋಜನೆ ಜಾರಿಗೊಳಿ ಸಲಾಗುವುದು. ಇದರಂತೆ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ತಲಾ 25 ಲಕ್ಷ ರೂ.ಗಳ ವಿಮೆ ಸೌಕರ್ಯ ಏರ್ಪಡಿಸಲಾಗುವುದು. ಲೋಕೋಪಯೋಗಿ ಇಲಾಖೆಗೆ 5259 ಕೋಟಿ ರೂ, ಆಪರೇಶನ್ ತೂಫಾನ್ಗೆ 10 ಕೋಟಿ ರೂ., ಪ್ರಿಯದರ್ಶಿನಿ ಉಚಿತ ಪ್ರಯಾಣಕ್ಕಾಗಿ 600 ಕೋಟಿ ರೂ, ಕ್ರೀಡಾ ಯೋಜನೆಯಾಗಿ ಮಲಬಾರ್ನಲ್ಲಿ ಫುಟ್ಭಾಲ್ ಕ್ರೀಡಾಂಗಣ ನಿರ್ಮಾಣಕ್ಕಾಗಿ 50 ಕೋಟಿ ರೂ. ಮೀಸಲಿರಿಸಲಾಗಿದೆ.
ಖಾಸಗಿ ಬಸ್ಗಳ ಮೂರು ತಿಂಗಳ ತೆರಿಗೆಯಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗುವುದು. ತಿರುವನಂತಪುರಂ, ಕೋಝಿಕೋಡ್ನಲ್ಲಿ ಲೈಟ್ ಮೆಟ್ರೋ ಯೋಜನೆ ಜಾರಿ ಮಾಡಲಾಗುವುದು.ಮಂಜೇಶ್ವರ ತಾಲೂಕಿಗೆ ನೂತನ ತಾಲೂಕು ಕಚೇರಿ ಒಳಗೊಂಡ ರೆವೆನ್ಯೂ ಟವರ್ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ.







