ಸುಳ್ಯ:ಮುಖ್ಯಮಂತ್ರಿಯವರ ಮೂಲ ಸೌಕರ್ಯ ಯೋಜನೆಯಡಿ ಸುಳ್ಯ ಕ್ಷೇತ್ರಕ್ಕೆ ಬಿಡುಗಡೆಯಾದ 25 ಕೋಟಿ ಅನುದಾನದಲ್ಲಿ ಆದ ಕಾಮಗಾರಿಗಳನ್ನು ಬಿಜೆಪಿ ಮುಖಂಡರನ್ನು ಮಾತ್ರ ಸೇರಿಸಿ, ಉಳಿದವರನ್ನು ಕಡೆಗಣಿಸಿ ಸುಳ್ಯ ಶಾಸಕರು ಉದ್ಘಾಟನೆ ಮಾಡುತ್ತಿರುವುದು ಶಿಷ್ಟಾಚಾರದ ಉಲ್ಲಂಘನೆ ಎಂದು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ‘ಕಾಯರ್ತೋಡಿ ದೇವಸ್ಥಾನದ ರಸ್ತೆ, ಜಯನಗರ ರಸ್ತೆ ಸೇರಿದಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಆದ ಕಾಮಗಾರಿಯನ್ನು ಶಾಸಕರು ಬಿಜೆಪಿ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ಮಾತ್ರ ಸೇರಿಸಿ ಉದ್ಘಾಟನೆ ಮಾಡಿದ್ದಾರೆ. ಕಾಂಗ್ರೆಸ್ನ ನಿಗಮ ಮಂಡಳಿ ಅಥವಾ ಜವಾಬ್ದಾರಿಯುತರನ್ನು ಹಾಗು ಅಧಿಕಾರಿಗಳನ್ನು ಕರೆಯದೆ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಹಾಗು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಅಲ್ಲದೆ ರಾಜ್ಯ ಸರಕಾರದ ಅನುದಾನದ ಕಾಮಗಾರಿಗೆ ಅಭಿನಂದನೆ ಸಲ್ಲಿಸಲು ಫ್ಲೆಕ್ಸ್ ಅಳವಡಿಸುವಾಗ ಅನುದಾನ ನೀಡಿದ ಮುಖ್ಯಮಂತ್ರಿಯ ಭಾವಚಿತ್ರವನ್ನೇ ಹಾಕದೆ ಬಿಜೆಪಿ ಮುಖಂಡರ ಚಿತ್ರ ಹಾಕಿ ಪ್ಲೆಕ್ಸ್ ಅಳವಡಿಸುವುದು ಖಂಡನೀಯ ಎಂದು ಅವರು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ‘ ಬಿಜೆಪಿಯವರು ಕೇಂದ್ರ ಸರಕಾರದಿಂದ ಅನುದಾನ ತರಿಸಿ ಕಾಮಗಾರಿ ಮಾಡಿಸಿ ಅವರೇ ಉದ್ಘಾಟಿಸಲಿ ಮತ್ತು ಪ್ಲೆಕ್ಸ್ ಅಳವಡಿಸಲಿ, ಅದು ಬಿಟ್ಟು ರಾಜ್ಯ ಸರಕಾರದ ಅನುದಾನದಲ್ಲಿ ಕ್ಷುಲ್ಲಕ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಮಾತ್ರ

ಅನುದಾನ ನೀಡಿಲ್ಲ, ಸಮಗ್ರ ಕರ್ನಾಟಕದ ಅಭಿವೃದ್ಧಿಯ ದೃಷ್ಠಿಯಿಂದ ಎಲ್ಲಾ ಕ್ಷೇತ್ರಗಳಿಗೂ ಅನುದಾನ ನೀಡಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಸುಳ್ಯ ತಾಲೂಕಿಗೆ ಮಾತ್ರ 243 ಕೋಟಿ ಬಂದಿದೆ. ಕೇಂದ್ರ ಸರಕಾರದಿಂದ ಸುಳ್ಯದ ಅಭಿವೃದ್ಧಿಗೆ ಎಷ್ಟು ಅನುದಾನ ಬಂದಿದೆ ಎಂಬುದನ್ನು ಬಿಜೆಪಿಗರು ಸ್ಪಷ್ಟ ಪಡಿಸಲಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ‘ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಬರುವುದಾಗಿ ತಿಳಿಸಿದ್ದರೂ ಅರಮನೆಗಯ ಸೇತುವೆಯ ಉದ್ಘಾಟನೆಯನ್ನು ಶಾಸಕರು ಮತ್ತು ಬಿಜೆಪಿಯವರು ಮಾತ್ರ ಉದ್ಘಾಟಿಸಿದ್ದಾರೆ. ಕಾಯರ್ತೋಡಿ ರಸ್ತೆ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿದ್ದರೂ ಒಂದು ದಿನದ ಮೊದಲೇ ಯಾರಿಗೂ ಹೇಳದೇ ಉದ್ಘಾಟಿಸಿದ್ದಾರೆ. ಇದು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದರು. ಅಂತಾರಾಜ್ಯ ಸಂಪರ್ಕದ ಆಲೆಟ್ಟಿ-ಬಡ್ಡಡ್ಕ ರಸ್ತೆ ಅಭಿವೃದ್ಧಿ ಬೇಡಿಕೆ 40 ವರ್ಷಗಳಿಂದ ಇದೆ. ಈ ರಸ್ತೆಗೆ ಕಾಂಗ್ರೆಸ್ ಸರಕಾರ ಅನುದಾನ ನೀಡಿದೆ ಎಂದರು.
ಕೊಡಿಯಾಲಬೈಲು ಗೌಡ ಸಮುದಾಯ ಭವನಕ್ಕೆ ತೆರಳುವ ಸುಳ್ಯ ಕೊಡಿಯಾಲಬೈಲು ರಸ್ತೆಯನ್ನು 40 ವರ್ಷಗಳಿಂದ ಅಭಿವೃದ್ಧಿ ಪಡಿಸಿಲ್ಲ, ಬಿಜೆಪಿಯವರಿಂದ ಅಭಿವೃದ್ಧಿ ಪಡಿಸಲು ಆಗದಿದ್ದರೆ ಹೇಳಲಿ, ನಾವು ಅನುದಾನ ತರಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ, ಪಿ.ಎಸ್.ಗಂಗಾಧರ,ಶಶಿಧರ ಎಂ.ಜೆ.ಮಾತನಾಡಿದರು.







