ಸುಳ್ಯ:ಇದೀಗ ಜಗತ್ತಿನೆಲ್ಲೆಡೆ ಫಿಫಾ ವಿಶ್ಬಕಪ್ ಸಂಭ್ರಮ. ಎಲ್ಲಡೆ ಕಾಲ್ಚೆಂಡು ಜ್ವರ ಹರಡುತ್ತಿದ್ದಂತೆ ಸುಳ್ಯದಲ್ಲಿಯೂ ಫುಟ್ಬಾಲ್ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದೆ.ಅಮೆರಿಕ, ಕೆನಡಾ, ಮೆಕ್ಸಿಕೊ ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ಫುಟ್ಬಾಲ್ ಹಬ್ಬ ಭಾರತದ ಕಾಲಮಾನ ತಡರಾತ್ರಿ ಅಥವಾ ಬೆಳಗಿನ ಜಾವ ನಡೆಯುತ್ತದೆ. ಆದರೂ ಅಭಿಮಾನಿಗಳು ಫುಟ್ಬಾಲ್ ಪಂದ್ಯಗಳನ್ನು
ನಿದ್ರೆ ಬಿಟ್ಟು ತಡರಾತ್ರಿ ಮತ್ತು ಬೆಳಗ್ಗಿನ ಜಾವ ಎದ್ದು ವೀಕ್ಷಿಸುತ್ತಾರೆ. ಬೃಹದಾಕಾರದ ಫ್ಲೆಕ್ಸ್, ಕಟೌಟ್ ಸ್ಥಾಪಿಸುವುದರ ಮೂಲಕವೂ ತಮ್ಮ ಫುಟ್ಬಾಲ್ ಪ್ರೀತಿಯನ್ನು ತೋರ್ಪಡಿಸುತ್ತಾರೆ.ಸುಳ್ಯ ಗಾಂಧಿನಗರದಲ್ಲಿ ಅರ್ಜೆಂಟೀನಾ ತಂಡದ ಅಭಿಮಾನಿಗಳು ಬೃಹದಾಕಾರದ ಫ್ಲೆಕ್ಸ್ ಒಂದನ್ನು ಸ್ಥಾಪಿಸಿದ್ದಾರೆ. ಫುಟ್ಬಾಲ್ ಅಭಿಮಾನಿ ಹಾಗು ಸಂಘಟಕರಾದ ಮುನಾಫರ್(ಮುನ್ನ), ರಾಝಿಕ್ ಕಾಸ್ಪಾಡಿ, ನಿಯಾಝ್, ಶಿಹಾಬ್ ಕೇರ್ಪಳ ನೇತೃತ್ವದಲ್ಲಿ ಅರ್ಜೆಂಟೀನಾ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಬೃಹತ್ ಫ್ಲೆಕ್ಸ್ ಸ್ಥಾಪಿಸಿದ್ದಾರೆ. ಲಿಯೋನೆಲ್ ಮೆಸ್ಸಿ ಹಾಗು ತಂಡದ

ಆಟಗಾರರಿರುವ ಬೃಹತ್ ಫ್ಲೆಕ್ಸ್ ಗಮನ ಸೆಳೆಯುತಿದೆ. ಅದರ ಸಮೀಪದಲ್ಲಿಯೇ ಬ್ರಝಿಲ್ ತಂಡದ ಪ್ಲೆಕ್ಸ್ ಕೂಡ ಸ್ಥಾಪಿಸಲಾಗಿದೆ, ಅನೂಶ್, ಖಲೀಲ್ ಹಾಗು ಇತರರು ತಮ್ಮ ನೆಚ್ಚಿನ ನೇಮರ್ ಹಾಗು ಬ್ರೆಝಿಲ್ ತಂಡದ ಪ್ಲೆಕ್ಸ್ ಸ್ಥಾಪಿಸಿದ್ದಾರೆ.
ಪೈಚಾರ್ನಲ್ಲಿ ಫುಟ್ಬಾಲ್ ಪಂದ್ಯಾಕೂಟ ಆರಂಭಗೊಳ್ಳುವುದಕ್ಕಿಂತ ತಿಂಗಳ ಮುಂಚೆಯೇ ಬೃಹತ್ ಫ್ಲೆಕ್ಸ್ ತಲೆ ಎತ್ತಿತ್ತು. ‘ಅಮಿಗೋಸ್’ ಫುಟ್ಬಾಲ್ ಕ್ಲಬ್ನ ಸದಸ್ಯರು ಇಲ್ಲಿ ಫ್ಲೆಕ್ಸ್ ಸ್ಥಾಪಿಸಿದ್ದಾರೆ. ಅರ್ಜೆಂಟೀನಾ, ಬ್ರೆಝಿಲ್ ಹಾಗು

ಪೋರ್ಚುಗಲ್ ತಂಡದ ಆಟಗಾರರನ್ನು ಒಳಗೊಂಡು ಒಂದೇ ಪ್ಲೆಕ್ಸ್ ಸ್ಥಾಪಿಸಿದ್ದಾರೆ. ಅಮಿಗೋಸ್ ಕ್ಲಬ್ನಲ್ಲಿಯ ಸದಸ್ಯರಲ್ಲಿ ಬೇರೆ ಬೇರೆ ತಂಡದ ಅಭಿಮಾನಿಗಳಿದ್ದಾರೆ. ಅವರು ತಮ್ಮ ಇಷ್ಟದ ಅರ್ಜೆಂಟೀನಾ, ಬ್ರೆಝಿಲ್, ಪೋರ್ಚುಗಲ್ ತಂಡಗಳ ಲಿಯೋನೆಲ್ ಮೆಸ್ಸಿ, ನೇಮರ್, ಕ್ರಿಸ್ಟಿಯಾನೋ ರೊನಾಲ್ಡೋ ಸೇರಿದ ಆಟಗಾರರ ಚಿತ್ರ ಒಳಗೊಂಡ ಬೃಹತ್ ಪ್ಲೆಕ್ಸ್ ಒಟ್ಟಾಗಿ ಸ್ಥಾಪಿಸಿದ್ದಾರೆ.
ಸುಳ್ಯ ನಗರ ಮಾತ್ರವಲ್ಲದೆ ಅಜ್ಜಾವರದಲ್ಲಿ ಫೈಹ ಯುನೈಟೆಡ್ ಅಜ್ಜಾವರ ನೇತೃತ್ವದಲ್ಲಿ ಪ್ಲೆಕ್ಸ್ ಸ್ಥಾಪಿಸಿದ್ದಾರೆ.ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿಯೂ ಅಲ್ಲಲ್ಲಿ ಅಭಿಮಾನಿಗಳು ಪ್ಲೆಕ್ಸ್, ಕಟೌಟ್ ಸ್ಥಾಪಿಸಿ ತಮ್ಮ ಫುಟ್ಬಾಲ್ ಪ್ರೀತಿಯನ್ನು ತೋರ್ಪಡಿಸಿದ್ದಾರೆ.

ಸುಳ್ಯದಲ್ಲಿ ಅರ್ಜೆಂಟೀನಾ, ಬ್ರೆಝಿಲ್, ಪೋರ್ಚುಗಲ್, ಫ್ರಾನ್ಸ್, ಜರ್ಮನಿ, ಕತ್ತರ್ ಸೇರಿ ವಿವಿಧ ತಂಡಗಳ ಅಭಿಮಾನಿಗಳಿದ್ದಾರೆ. ಮೆಸ್ಸಿ, ನೇಮರ್, ರೊನಾಲ್ಡೊ, ಕಿಲಿಯನ್ ಎಂಬಾಪೆ ಸೇರಿ ಹಲವು ಸ್ಟಾರ್ ಆಟಗಾರರ ಫಾಲೋವರ್ಸ್ ಸಾಕಷ್ಟು ಮಂದಿ ಇದ್ದಾರೆ. ಅದರಲ್ಲೂ ಮೆಸ್ಸಿಗೆ ಅಭಿಮಾನಿಗಳ ಸಂಖ್ಯೆ ಸ್ವಲ್ಪ ಹೆಚ್ಚೇ ಇದ್ದಾರೆ.
ಕೆಲವೆಡೆ ತಂಡಗಳ ಪೋಸ್ಟರ್ ಇದ್ದರೆ ಕೆಲವೆಡೆ ವಿವಿಧ ಸ್ಟಾರ್ ಆಟಗಾರರ ಚಿತ್ರಗಳನ್ನು ಒಳಗೊಂಡ ಪ್ಲೆಕ್ಸ್ಗಳು ಇವೆ.
ಕಳೆದ ಬಾರಿ ಅರ್ಜೆಂಟೀನಾ ತಂಡವನ್ನು ಚಾಂಪಿಯನ್ ಆಗಿ ರೂಪಿಸಿದ 39 ವರ್ಷದ ಮೆಸ್ಸಿ ಈ ಬಾರಿ ತಮ್ಮ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಮೂಲಕ ಭರ್ಜರಿ ಆರಂಭ ನೀಡಿರುವುದು ಸುಳ್ಯದ ಮೆಸ್ಸಿ ಅಭಿಮಾನಿಗಳಲ್ಲಿಯೂ ಸಂಭ್ರಮ ಇಮ್ಮಡಿಗೊಳಿಸಿದೆ.








