*ಗಂಗಾಧರ ಕಲ್ಲಪಳ್ಳಿ.
ಇಂದು ಜಗತ್ತಿನಾದ್ಯಂದ ಜನಪ್ರಿಯವಾಗಿರುವ ಯೋಗವನ್ನು ಕಲಿಸಲು, ಯೋಗವನ್ನು ಬೆಳೆಸಲು ಕಳೆದ ನಾಲ್ಕು ದಶಕಗಳಿಂದ ಯೋಗಕ್ಕಾಗಿ ಬದುಕು ಮುಡಿಪಾಗಿಟ್ಟವರು ಯೋಗರತ್ನ ಬಿರುದಾಂಕಿತ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿಯವರು.41 ವರ್ಷಗಳಿಂದ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ಮಂದಿಗೆ ಉಚಿತ ಯೋಗ ತರಬೇತಿ ನೀಡಿದ ‘ಯೋಗಾಚಾರ್ಯರು ಅವರು.’ಯೋಗ’ವೆಂದರೆ ಶಿಸ್ತುಬದ್ಧ, ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಮಾಡುವ ವಿಧಾನ.ಅದು
ಪರಮಾತ್ಮನ ಜೀವಾತ್ಮನ ಮಿಲನದ ಪ್ರಕ್ರಿಯೆ. ಅದೊಂದು ‘ಮ್ಯಾಜಿಕ್ ಅಥವಾ ಸರ್ಕಸ್ ಅಲ್ಲ’ ಎನ್ನುವ ಗೋಪಾಲಕೃಷ್ಣ ದೇಲಂಪಾಡಿಯವರು 2500ಕ್ಕೂ ಹೆಚ್ಚು ಯೋಗ ಪ್ರದರ್ಶನಗಳನ್ನು ಕರ್ನಾಟಕದಾದ್ಯಂತ ನೀಡಿದ್ದಾರೆ. ಜಿಲ್ಲೆಯಾದ್ಯಂತ ಲಕ್ಷಾಂತರ ಮಂದಿಗೆ ಯೋಗ ತರಬೇತಿ ನೀಡಿ ಸ್ವಾಸ್ಥ್ಯ ರಕ್ಷಣೆಯ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ದಕ್ಷಿಣ ಕನ್ನಡ ಹಾಗು ಕಾಸರಗೋಡು ಜಿಲ್ಲೆಗಳಲ್ಲಿ ನೂರಾರು ಶಿಬಿರಗಳ ಮೂಲಕ ಯೋಗವನ್ನು ಜನಪ್ರಿಯಗೊಳಿಸಿದ್ದಾರೆ.
1958ರಲ್ಲಿ ಸುಳ್ಯ ಸಮೀಪದ ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಪಟೇಲ ಕೃಷ್ಣಯ್ಯ ಕಾಟೂರಾಯ ಮತ್ತು ಪಾರಿಜಾತ ದಂಪತಿಗಳ ನಾಲ್ಕನೆಯ ಪುತ್ರರಾಗಿ ಜನಸಿದ ಗೋಪಾಲಕೃಷ್ಣರು ಪ್ರಾಥಮಿಕ ವಿದ್ಯಾಭ್ಯಾಸ ದೇಲಂಪಾಡಿ ಮತ್ತು ಸುಳ್ಯದಲ್ಲಿ, ಕಾಲೇಜು ಶಿಕ್ಷಣವು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಡೆದರು. ಓದಿನ ಸಂದರ್ಭದಲ್ಲಿ ಸುಳ್ಯದ ಪುಟ್ಟಪ್ಪ ಜೋಶಿ ಹಾಗೂ ವಿಟ್ಲದ ಚಿದಾನಂದ ಅವರಿಂದ ಯೋಗ ಶಿಕ್ಷಣ ಪಡೆದರು, ಮಲ್ಲಾಡಿ ಹಳ್ಳಿಯ ರಾಘವೇಂದ್ರ ಸ್ವಾಮಿಗಳಿಂದ ಮಾರ್ಗದರ್ಶನವನ್ನೂ ಪಡೆದಿದ್ದಾರೆ. ಮಂಗಳೂರಿನಲ್ಲಿ

ನೆಲೆಸಿರುವ ಅವರು ಮಂಗಳೂರು ಮಹಾನಗರಪಾಲಿಕೆಯಲ್ಲಿ ಹಿರಿಯ ಸ್ವಾಸ್ಥ್ಯ ನಿರೀಕ್ಷಕರಾಗಿ 27 ವರ್ಷಗಳ ಸೇವೆ ಸಲ್ಲಿಸಿ 2008ರಲ್ಲಿ ಸ್ವಯಂ ನಿವೃತ್ತಿ ಪಡೆದ ಬಳಿಕ ನಿವೃತ್ತಿ ಜೀವನವನ್ನು ಪೂರ್ತಿಯಾಗಿ ಯೋಗ ಕಲಿಸಲು ಮತ್ತು ಯೋಗ ಪ್ರಚಾರಕ್ಕಾಗಿ ಮೀಸಲಿಟ್ಟಿದ್ದಾರೆ. ‘ಯೋಗ ಮಾರಾಟಕ್ಕಲ್ಲ, ಹಂಚಿಬಿಡಿ’ ಎಂದು ಪುಟ್ಟಪ್ಪ ಜೋಶಿಯವರು ಹೇಳಿದ್ದನ್ನು ನೆನಪಿಸಿಕೊಳ್ಳುವ ಇವರು ತಾವು ಹತ್ತು ವರ್ಷ ಕಾಲ ಕಲಿತ ಬಳಿಕ ಯೋಗದ ಬಗ್ಗೆ ತಿಳಿಸಿಕೊಡಲು ಆರಂಭಿಸಿದ್ದರು.1972-73 ರಿಂದ ಯೋಗಾಭ್ಯಾಸ ಆರಂಭಿಸಿ,1977ರಲ್ಲಿ ಪ್ರಥಮ ಯೋಗ ಪ್ರದರ್ಶನ ನೀಡಿದ ಇವರು 1983ರಿಂದ ಉಚಿತ ಯೋಗ ಶಿಬಿರವನ್ನು ಆರಂಭಿಸಿದರು.ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆ ಸೇರಿ ವಿವಿಧೆಡೆಗಳಲ್ಲಿ ಯೋಗ ಪ್ರದರ್ಶನ ಹಾಗೂ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಶಾಲಾ-ಕಾಲೇಜು, ವಸತಿನಿಲಯ, ವಿವಿಧ ಸಂಘ ಸಂಸ್ಥೆಗಳಲ್ಲಿ, ಮಠ, ಮಂದಿರಗಳಲ್ಲಿ, ದೇವಸ್ಥಾನಗಳಲ್ಲಿ, ಯೋಗ ಹೀಗೆ ನಾಡಿನ ಮೂಲೆ ಮೂಲೆಯಲ್ಲಿ ತರಬೇತಿಯನ್ನು ನೀಡಿರುತ್ತಾರೆ. ಯೋಗದ ಜೊತೆ ಪ್ರಾಣಾಯಾಮ, ಧ್ಯಾನ, ಮುದ್ರೆ ಹಾಗೂ ಆಹಾರ ಪದ್ಧತಿಯ ಬಗ್ಗೆ

ನಿರಂತರ ಮಾಹಿತಿ ನೀಡುತ್ತಾ ಬಂದಿದ್ದಾರೆ. ಜೊತೆಗೆ
ಆನ್ಲೈನ್ ಯೋಗ ಮತ್ತು ಮುದ್ರಾ ತರಗತಿಗಳನ್ನು ನೀಡುತ್ತಾರೆ.ದೇಲಂಪಾಡಿ ಯೋಗ ಪ್ರತಿಷ್ಠಾನದ ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ವರ್ಷಪೂರ್ತಿ ಯೋಗಾಸನ ಶಿಬಿರವನ್ನು ಆಯೋಜಿಸುತ್ತಾರೆ.
ದೇಲಂಪಾಡಿಯವರ ಪತ್ನಿ ವೀಣಾ ಸರಸ್ವತಿಯವರು ಆಸಕ್ತರಿಗೆ ಯೋಗ ತರಬೇತಿಯನ್ನು ನೀಡುತ್ತಿದ್ದಾರೆ. ಹಿರಿಯ ಮಗ ಕಿಶನ್ ದೇಲಂಪಾಡಿ ವೈದ್ಯರಾಗಿದ್ದು ಉತ್ತಮ ಯೋಗಪಟುವೂ ಆಗಿದ್ದಾರೆ. ಡಾ.ಕಿಶನ್ ಪತ್ನಿ ಡಾ. ಸ್ವೀಕೃತಾ ಇವರು ಯೋಗ ಪ್ರಸಾರದಲ್ಲಿ ಸಹಕರಿಸುತ್ತಿದ್ದಾರೆ. ಕಿರಿಯ ಮಗ ಕಿರಣ್ ಇಂಜಿನಿಯರ್ ಆಗಿ ಜರ್ಮನಿಯಲ್ಲಿ ಎಂ.ಎಸ್. ಓದಿದ್ದು, ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.ಇವರೂ ಉತ್ತಮ

ಯೋಗಪಟುವಾಗಿದ್ದು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಿರಣ್ ಪತ್ನಿ ಅಕ್ಷತಾ, ಇಂಜಿನಿಯರ್ ಇವರು ಯೋಗ ಪ್ರಸಾರದಲ್ಲಿ ಸಹಕರಿಸುತ್ತಿದ್ದಾರೆ.
ಯೋಗಾಭ್ಯಾಸಿಗಳ ಅನುಕೂಲಕ್ಕಾಗಿ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಆರೋಗ್ಯ ರಕ್ಷಣೆಗಾಗಿ ಯೋಗ’ ಪುಸ್ತಕ 5 ಬಾರಿ ಮುದ್ರಣ ಕಂಡಿದೆ. ‘ಉತ್ತಮ ಜೀವನ ಶೈಲಿಗಾಗಿ ಯೋಗ” ಎರಡು ಬಾರಿ ಮುದ್ರಣ ಕಂಡಿದೆ. ‘ಯಾವ ರೋಗಿಗೆ ಯಾವ ಯೋಗ’ಕೈಪಿಡಿ, ಸ್ತ್ರೀಯರಿಗೆ ಯೋಗಾಸನ ಕಿರುಲೇಖನ, ಯೋಗಾಸನ ಮಾರ್ಗದರ್ಶಿ ಕಿರುಪತ್ರ, ಆರೋಗ್ಯಕ್ಕಾಗಿ ಯೋಗಾಸನ, ವಿದ್ಯಾರ್ಥಿಗಳಿಗಾಗಿ ಯೋಗ ಹಾಗೂ ಸೂರ್ಯನಮಸ್ಕಾರದ ಗೋಡೆ ಕ್ಯಾಲೆಂಡರುಗಳನ್ನು ರಚಿಸಿದ್ದಾರೆ. ‘ಗರ್ಭಿಣಿ ಸ್ತ್ರೀಯರಿಗಾಗಿ ಯೋಗ’, ಎಂಬ ಆಂಗ್ಲ ಭಾಷೆಯ ಪುಸ್ತಕ ಬರೆದಿದ್ದಾರೆ.ನಾಡಿನ ಪ್ರಸಿದ್ಧ ದಿನಪತ್ರಿಕೆ,ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಅನೇಕ ಯೋಗ, ಆರೋಗ್ಯ ಲೇಖನಗಳನ್ನು, ಅಂಕಣಗಳನ್ನು ನಿರಂತರವಾಗಿ ಬರೆಯುತ್ತಾರೆ. ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿ ನೂರಾರು ಪ್ರಶಸ್ತಿ, ಬಿರುದು ಪ್ರಶಸ್ತಿ ಇವರನ್ನು ಅರಸಿ ಬಂದಿದೆ.
2015ರಿಂದ ಪ್ರತಿ ವರ್ಷ ಜೂನ್ 21 ರಂದು ದ.ಕ. ಜಿಲ್ಲಾಡಳಿತ ನಡೆಸುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ

ದೇಲಂಪಾಡಿಯವರು ಯೋಗಾಸನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.ಹಲವು ಮಂದಿ ಹಿರಿಯ ಅಧಿಕಾರಿಗಳಿಗೆ ಯೋಗದ ಪಾಠ ಹೇಳಿ ಕೊಟ್ಟಿದ್ದಾರೆ.
ಯೋಗಾಸನಗಳ ಮಹತ್ವ ಹೇಳಿಕೊಡುವುದು. ಕಾಲಕಾಲಕ್ಕೆ ತಕ್ಕುದಾದ ಯೋಗಾಸನಗಳು, ಸರಳ ಪ್ರಾಣಾಯಾಮ, ಮುದ್ರೆಗಳು, ಮಂತ್ರ ಮುದ್ರೆಗಳು, ವರ್ಣ ಚಿಕಿತ್ಸೆ, ಚಕ್ರಧ್ಯಾನ, ಧ್ಯಾನಗಳಿಗೆ ದೇಲಂಪಾಡಿಯವರ ಯೋಗ ತರಗತಿಗಳಲ್ಲಿ ಮಹತ್ವ ಕೊಡಲಾಗುತ್ತಿದೆ.ತರಬೇತಿ ನೀಡುವ ಪೂರ್ವ ಸಿದ್ಧತೆಯಿಂದ ಹಿಡಿದು ಆಸನದ ಭಂಗಿ, ಅದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿಗುವ ಪ್ರಯೋಜನಗಳು, ಸರಳ ಆಸನಗಳ ಕುರಿತು ಎಳೆಎಳೆಯಾಗಿ ಬಿಡಿಸಿ ಹೇಳುತ್ತಾ ಹೋಗುವ ಇವರ ಮಾತಿನ ಶೈಲಿ ಯೋಗ ಪಟುಗಳಿಗೆ ಚೈತನ್ಯ, ಸ್ಪೂರ್ತಿ ತುಂಬುತ್ತದೆ, ನರನಾಡಿಗಳಲ್ಲೂ ಉತ್ಸಾಹ ಹೆಚ್ಚಿಸುತ್ತದೆ. ಇವರು ಸತತ ಪರಿಶ್ರಮ, ತಾಳ್ಮೆ ಮತ್ತು ಓದಿ ತಿಳಿದು ಯೋಗದಲ್ಲಿ ಅಗಾಧ ಸಾಧನೆಗೈದಿದ್ದಾರೆ. ಇವರು ಸರಳ ಸಜ್ಜನಿಕೆಯ ಸದಾ ಹಸನ್ಮುಖಿ, ಸ್ನೇಹಶೀಲ ವ್ಯಕ್ತಿತ್ವ.
ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಮುತುವರ್ಜಿಯಿಂದಾಗಿ ಭಾರತೀಯ ಯೋಗ ವಿಜ್ಞಾನವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವವನ್ನು ಪಡೆದಿರುವುದು ಅಲ್ಲದೆ ಪ್ರತಿ ವರ್ಷ ಜೂನ್ 21ನ್ನು ವಿಶ್ವಯೋಗ ದಿನವನ್ನಾಗಿ ಆಚರಿಸುವಂತಾದುದು ಭಾರತದ ಹೆಮ್ಮೆ ಎಂದು ಹೇಳುವ ದೇಲಂಪಾಡಿಯವರು ವಿಶ್ವ ಯೋಗ ದಿನಾಚರಣೆಗಾಗಿ ಜಿಲ್ಲೆಯ ಹಲವಾರು ಕಡೆ ಬಹಳಷ್ಟು ಪೂರ್ವ ತಯಾರಿಯನ್ನು ನಡೆಸಿ ಜೂನ್ 21ರಂದು ವಿವಿಧೆಡೆ ಯೋಗ ಕಾರ್ಯಕ್ರಮವನ್ನು ನಡೆಸಿ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಸ್ವಸ್ಥ, ಸುದೃಢ ಸಮಾಜ ನಿರ್ಮಾಣವಾಗಬೇಕಾದರೆ ಸ್ವಸ್ಥ ಯುವ ಸಮೂಹದ ಅವಶ್ಯಕತೆಯಿದೆ. ನಾವು ಎಳವೆಯಲ್ಲಿ ಶಿಸ್ತುಬದ್ಧವಾದ ಯೋಗಕಲೆಯನ್ನು ಮಕ್ಕಳಿಗೆ ಕಲಿಸುವುದರಿಂದ ಕಳಂಕರಹಿತ ಸಮಾಜವನ್ನು ಕಟ್ಟಲು ಸಾಧ್ಯ ಎನ್ನುವ ದೇಲಂಪಾಡಿಯವರು ‘ಪ್ರತಿಯೊಬ್ಬರೂ ತಮ್ಮ ಆರೋಗ್ಯ ರಕ್ಷಣೆಗಾಗಿ ದಿನನಿತ್ಯ ಹತ್ತರಿಂದ ಹದಿನೈದು ಯೋಗಾಸನಗಳನ್ನಾದರೂ ತಪ್ಪದೇ ಅಭ್ಯಾಸ ಮಾಡಬೇಕು’ ಎನ್ನುತ್ತಾರೆ. ಯಾವುದಕ್ಕೂ ಗುರುವಿನ ನಿಯಮಬದ್ಧ ಮಾರ್ಗದರ್ಶನ ಅತೀ ಅಗತ್ಯ ಎನ್ನುತ್ತಾರೆ. ಸಮಾಜದ ಸ್ವಾಸ್ಥ್ಯ ನಿರ್ವಹಣೆಗೆ ಯೋಗವೇ ಯೋಗ್ಯ ಎಂದು ನಂಬಿ ಜೀವನವನ್ನೇ ಯೋಗಕ್ಕಾಗಿ ಮುಡಿಪಾಗಿಟ್ಟು ನಿಸ್ವಾರ್ಥವಾಗಿ ಯೋಗಸೇವೆ ಸಲ್ಲಿಸುತ್ತಾ ಯೋಗಕಲೆಯ ಪ್ರಚಾರವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ.








