ಸುಳ್ಯ:ಅನಾದಿ ಕಾಲದಿಂದಲೂ ಆಚರಣೆಯಲ್ಲಿರುವ ಸನಾತನ ಹಿಂದೂ ಧರ್ಮ ಜಗತ್ತಿಗೆ ಆಧಾರ ಎಂದು ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರಭಾರತಿ ಸ್ವಾಮೀಜಿ ಹೇಳಿದರು.ಸುಳ್ಯ ತಾಲೂಕಿನ ಅಜ್ಜಾವರದ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಾತಾ ಸಭಾಭವನವನ್ನು ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು.ಪ್ರಪಂಚದಲ್ಲಿ ನಾವು ಯಾವುದನ್ನು ಬೇಕು ಎಂದು ಬಯಸುತ್ತೇವೆಯೋ ಅದನ್ನು
ನೀಡುವ ಧರ್ಮ ಜಗತ್ತಿಗೆ ಆಧಾರ.ಎಲ್ಲರೂ ಬಯಸುವುದು ಸುಖ ಮತ್ತು ಶ್ರೇಯಸ್ಸನ್ನು. ಸನಾತನ ಹಿಂದೂ ಧರ್ಮದ ಆಚರಣೆಯಿಂದ ನಾವು ಬಯಸುವ ಸುಖ ಮತ್ತು ಶ್ರೇಯಸ್ಸು ಪಡೆಯಲು ಸಾಧ್ಯ. ಭಗವಂತನ ಆರಾಧನೆಯ ಜೊತೆಗೆ ಇತರರಿಗೆ ಉಪಕಾರವಾಗುವ ಮತ್ತು ಜಗತ್ತಿಗೆ ಒಳಿತಾಗುವ ಕೆಲಸ ಮಾಡಿ ಎಂದು ಸನಾತನ ಹಿಂದೂ ಧರ್ಮ ಬೋಧಿಸುತ್ತದೆ. ನಮ್ಮ ಎಲ್ಲಾ ಪ್ರಶ್ನೆಗಳಿಗೆ

ಹಿಂದೂ ಧರ್ಮ ಉತ್ತರಿಸುತ್ತದೆ. ಧರ್ಮದ ಶ್ರೇಷ್ಠತೆಯನ್ನು ಧರ್ಮವನ್ನು ಆಳವಾಗಿ ಅರಿತವರಿಂದ ತಿಳಿದುಕೊಳ್ಳಬೇಕು. ಸನಾತನ ಧರ್ಮದ ಆಳವನ್ನೂ, ಮಹತ್ವವನ್ನು ತಿಳಿದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದರು. ಸನಾತನ ಹಿಂದೂ ಧರ್ಮವನ್ನು ಚೆನ್ನಾಗಿ ಅರಿತು ಆಚರಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದರು.
ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಕರ್ನಾಟಕ ಬ್ಯಾಂಕ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರಿ ಉಮಾದೇವಿ ಮಾತನಾಡಿದರು.

ಶ್ರೀ ಮಹಿಷಮರ್ದಿನೀ ಸೇವಾ ಟ್ರಸ್ಟ್ನ ಅಧ್ಯಕ್ಷ ಎ.ಶಿವರಾವ್ ಸ್ವಾಗತಿಸಿ,ಕಾರ್ಯದರ್ಶಿ ಎ.ಭಾಸ್ಕರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಮಾತಾ ಸಭಾ ಭವನ ಲೋಕಾರ್ಪಣಾ ಕಾರ್ಯಕ್ರಮದ ಪ್ರಧಾನ ಸಂಚಾಲಕ ಸುಬೋಧ್ ಶೆಟ್ಟಿ ಮೇನಾಲ ವಂದಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಿಷಮರ್ದಿನೀ ದೇವಸ್ಥಾಕ್ಕೆ ಸರಕಾರದಿಂದ ಮಂಜೂರಾದ ರೂ.60 ಲಕ್ಷ ಅನುದಾನ ಹಾಗೂ ಕರ್ನಾಟಕ ಬ್ಯಾಂಕ್ನ ಸಹಾಯಧನದಲ್ಲಿ ದೇವಸ್ಥಾನದಲ್ಲಿ ಸುಸಜ್ಜಿತವಾದ ಸಭಾಭವನವನ್ನು ನಿರ್ಮಾಣಮಾಡಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಸಭಾಭವನದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ ನಡೆಯಿತು. ಬಳಿಕ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಮಹಿಷಮರ್ದಿನೀ ದೇವರ ಪ್ರಸನ್ನ ಪೂಜೆ ನೆರವೇರಿಸಿದ ಬಳಿಕ ಸಭಾಭವನದ ಉದ್ಘಾಟನೆ ನಡೆಯಿತು.













