ಸುಳ್ಯ:ಸುಳ್ಯಕ್ಕೆ ವಿದ್ಯುತ್ ಸರಬರಾಜು ಮಾಡಲು ನಿರ್ಮಾಣ ಮಾಡಲಾಗುತ್ತಿರುವ 110 ಕೆವಿ ಸಬ್ ಸ್ಟೇಷನ್ ಹಾಗೂ ಲೈನ್ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ಸುಳ್ಯ ತಾಲೂಕು ಪಂಚಾಯತ್ನಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ಕೆಪಿಟಿಸಿಎಲ್ ಇಂಜಿನಿಯರ್ಗಳು,ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.110 ಕೆವಿ ಲೈನ್ ಎಳೆಯಲು ಒಟ್ಟು
89 ಟವರ್ಗಳು ನಿರ್ಮಾಣ ಆಗಬೇಕಾಗಿದ್ದು ಇದರಲ್ಲಿ 50 ಟವರ್ಗಳ ಫೌಂಡೇಶನ್ ಕಾಮಗಾರಿ ಪೂರ್ತಿಗೊಂಡಿದೆ. ನಾಲ್ಕು ಟವರ್ಗಳ ಫೌಂಡೇಶನ್ ಕಾಮಗಾರಿ ಪ್ರಗತಿಯಲ್ಲಿದೆ. 3 ಟವರ್ಗಳ ನಿರ್ಮಾಣ ಮಾಡಲಾಗಿದೆ.
ಸಬ್ ಸ್ಟೇಷನ್ ಕಾಮಗಾರಿ ಬಹುತೇಕ ಪೂರ್ತಿಯಾಗಿದೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ಗಳು ಸಭೆಗೆ ಮಾಹಿತಿ ನೀಡಿದರು.ಇನ್ನು 35 ಟವರ್ಗಳ ನಿರ್ಮಾಣ ಆಗಬೇಕಾಗಿದೆ. ಈ ಕುರಿತು ಚರ್ಚೆ ನಡೆದು ಪ್ರತಿ ಟವರ್ ನಿರ್ಮಾಣ ಸ್ಥಳದ ಬಗ್ಗೆ ಮಾಹಿತಿ ಪಡೆದು ‘ಪ್ರತಿ ಕಡೆಗಳಲ್ಲಿ ಮತ್ತೊಂದು ಹಂತದಲ್ಲಿ ಪರಿಶೀಲನೆ ನಡೆಸಿ, ಇರುವ ಅಡೆ ತಡೆಗಳನ್ನು ಪರಿಹರಿಸಿ ಕಾಮಗಾರಿ ಆದಷ್ಟು ಬೇಗ ನಡೆಸಬೇಕು ಎಂದು ಭಾಗೀರಥಿ ಮುರುಳ್ಯ ಹಾಗೂ ಎಸಿ ಸ್ಟೆಲ್ಲಾ ವರ್ಗೀಸ್ ಅವರು ಕೆಪಿಟಿಸಿಎಲ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಸರ್ವೆ ನಡೆಸಲು

ನಿರ್ಮಾಣವಾದ ಟವರ್ಗಳಲ್ಲೊಂದು
ಸರ್ವೆಯರ್ಗಳ ನೇಮಕ ಮತ್ತಿತರ ವ್ಯವಸ್ಥೆ ಮಾಡುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ತಿಯಾಗುವ ನಿರೀಕ್ಷೆ ಇದೆ. ಕಾಮಗಾರಿಯ ಪ್ರಗತಿ ಪರಿಶೀಲನೆ ಪ್ರತಿ ತಿಂಗಳೂ ನಡೆಸಲಾಗುವುದು ಎಂದು ಹೇಳಿದರು.
ಸುಳ್ಯ ತಹಶೀಲ್ದಾರ್ ಎಂ.ಮಂಜುಳಾ, ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್,
ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ
ಶ್ರೀನಾಥ್ ಆಚಾರ್ಯ, ಅಮರಾವತಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ ಸಚಿನ್ ಕುಮಾರ್, ನೀನಾ ಶೆಟ್ಟಿ,ಸಹಾಯಕ ಇಂಜಿನಿಯರ್ ವಿವೇಕಾನಂದ ಶೆಣೈ, ಸುಳ್ಯ ಭೂದಾಖಲೆಗಳ ಸಹಾಯಕ ನಿರ್ದೇಶಕ ಜನೀಶ್ ಕುಮಾರ್, ಪುತ್ತೂರು
ಭೂದಾಖಲೆಗಳ ಸಹಾಯಕ ನಿರ್ದೇಶಕ ಶ್ರೀನಿವಾಸಮೂರ್ತಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ರೇಖಾ, ತೋಟಗಾರಿಕಾ ಇಲಾಖೆಯ ಅರಬಣ್ಣ ಪೂಜೇರಿ, ಕಂದಾಯ ನಿರೀಕ್ಷಕರಾದ ಅವಿನ್ ರಂಗತ್ತಮಲೆ, ಉಪವಲಯ ಅರಣ್ಯಾಧಿಕಾರಿಗಳಾದ ಸಂದೀಪ್, ರಂಜಿತಾ,
ಶಾಸಕರ ಆಪ್ತ ಕಾರ್ಯದರ್ಶಿಗಳಾದ ಹರೀಶ್, ಪ್ರಸಾದ್ ಕಾಟೂರ್ ಮತ್ತಿತರರು ಉಪಸ್ಥಿತರಿದ್ದರು.













