ನವದೆಹಲಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಪಾಕಿಸ್ತಾನದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿತ ಮಾಡಲು ಭಾರತ ನಿರ್ಧರಿಸಲಾಗಿದೆ. ಭಾರತದಲ್ಲಿ ಇರುವ ಪಾಕಿಸ್ತಾನದ ದೂತಾವಾಸ ಕಚೇರಿಗಳಲ್ಲಿನ ಮಿಲಿಟರಿ ರಾಜತಾಂತ್ರಿಕರನ್ನು ದೇಶದಿಂದ ಹೊರಗೆ ಕಳುಹಿಸಲು ತೀರ್ಮಾನಿಸಿದೆ.ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಅಮಾನತುಗೊಳಿಸಲು ತೀರ್ಮಾನಿಸಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ
ನವದೆಹಲಿಯಲ್ಲಿ ಬುಧವಾರ ಸಂಜೆ ನಡೆದ ‘ಭದ್ರತೆ ಕುರಿತ ಸಚಿವ ಸಂಪುಟ’ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ಗಡಿಯಾಚೆಗಿನ ನಂಟು ಇದೆ ಎಂಬುದು ಈ ತೀರ್ಮಾನಕ್ಕೆ ಕಾರಣ. ಸಭೆಯು ಎರಡು ತಾಸಿಗೂ ಹೆಚ್ಚು ಅವಧಿಗೆ ನಡೆಯಿತು.1960ರಲ್ಲಿ ಮಾಡಿಕೊಂಡ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತಿನಲ್ಲಿ ಇರಿಸಲಾಗಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವ ತನಕ ಈ ತೀರ್ಮಾನ ಜಾರಿಯಲ್ಲಿ ಇರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.ಅಟ್ಟಾರಿ ಗಡಿಯಲ್ಲಿ ಇರುವ ಚೆಕ್ಪೋಸ್ಟ್ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುತ್ತದೆ ಎಂದು ಅವರು ಹೇಳಿದರು. ಈ ಮಾರ್ಗದ ಮೂಲಕ ಗಡಿ ದಾಟಿದವರು ಮೇ 1ಕ್ಕೆ ಮೊದಲು ವಾಪಸ್ಸಾಗಬೇಕು.
ನವದೆಹಲಿಯಲ್ಲಿ ಇರುವ ಪಾಕಿಸ್ತಾನದ ದೂತಾವಾಸ ಕಚೇರಿಗಳಲ್ಲಿ ಕರ್ತವ್ಯದಲ್ಲಿರುವ ಮಿಲಿಟರಿ, ರಕ್ಷಣೆ, ನೌಕಾಸೇನೆ ಮತ್ತು ವಾಯುಸೇನೆಯ ಸಲಹೆಗಾರರನ್ನು ಭಾರತದಿಂದ ಹೊರಕ್ಕೆ ಕಳುಹಿಸಲಾಗುತ್ತದೆ ಎಂದರು. ಅವರು ಒಂದು ವಾರದಲ್ಲಿ ಭಾರತದಿಂದ ನಿರ್ಗಮಿಸಬೇಕಿದೆ.
ಇಸ್ಲಾಮಾಬಾದ್ನಲ್ಲಿ ಇರುವ ಭಾರತದ ದೂತಾವಾಸ ಕಚೇರಿಗಳಿಂದ ರಕ್ಷಣೆ, ನೌಕಾಪಡೆ ಮತ್ತು ವಾಯುಪಡೆಯ ಸಲಹೆಗಾರರನ್ನು ಭಾರತವು ವಾಪಸ್ ಕರೆಸಿಕೊಳ್ಳಲಿದೆ.
ದೂತಾವಾಸ ಕಚೇರಿಗಳ ಸಿಬ್ಬಂದಿ ಸಂಖ್ಯೆಯನ್ನು ಈಗಿರುವ 55ರಿಂದ 30ಕ್ಕೆ ಇಳಿಸಲಾಗುತ್ತದೆ. ಇದು ಮೇ 1ಕ್ಕೆ ಮೊದಲು ಜಾರಿಗೆ ಬರಲಿದೆ’ ಎಂದು ಮಿಸ್ರಿ ಹೇಳಿದರು.ಪಾಕಿಸ್ತಾನದ ಪ್ರಜೆಗಳಿಗೆ ಸಾರ್ಕ್ ವೀಸಾ ವಿನಾಯಿತಿ ಯೋಜನೆಯ ಅಡಿಯಲ್ಲಿ ಭಾರತ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಈಗಾಗಲೇ ಇಂತಹ ವೀಸಾ ಪಡೆದಿದ್ದರೆ, ಅದು ರದ್ದಾಗಿದೆ ಎಂದು ಭಾವಿಸಬೇಕು ಎಂಬ ಮಾಹಿತಿಯನ್ನು ಮಿಸ್ರಿ ನೀಡಿದರು.
ಪಹಲ್ಗಾಮ್ನಲ್ಲಿ ನಡೆದ ದಾಳಿಯ ಬಗ್ಗೆ ಸಮಿತಿಗೆ ಪೂರ್ಣ ವಿವರ ಒದಗಿಸಲಾಯಿತು.ವಿಶ್ವದ ಹಲವು ರಾಷ್ಟ್ರಗಳು ಭಾರತದ ಜೊತೆ ನಿಲ್ಲುವುದಾಗಿ ಹೇಳಿವೆ’ ಎಂದು ಮಿಸ್ರಿ ಮಾಹಿತಿ ನೀಡಿದರು.