ಇಂದೋರ್: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 14 ರನ್ಗಳಿಂದ ಜಯ ಸಾಧಿಸಿದೆ. ಆ ಮೂಲಕ ಸರಣಿಯಲ್ಲಿ 2-1ಮುನ್ನಡೆ ಸಾಧಿಸಿದೆ.ಮೊದಲು ಬ್ಯಾಟ್ ಮಾಡಿದ ಭಾರತ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ 20 ಓವರ್ಗಳಲ್ಲಿ
ಎಲ್ಲಾ ವಿಕೆಟ್ ಕಳೆದುಕೊಂಡು 223 ರನ್ ಗಳಿಸಿತು. ಗುರಿ ಬೆನ್ನಟ್ಟಿದ ವಿಂಡೀಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ವಿಂಡೀಸ್ ಪರ ಕಾಮಿಲ್ ಪೂರಾನ್(42), ಶಿಮ್ರಾನ್ ಹೆಟ್ಮೇರ್(43), ಶೆರ್ಫೇನ್ ರುದರ್ಫೋರ್ಡ್ (32) ಹಾಗು ಕೊನೆಯಲ್ಲಿ ಶಮರ್ ಸ್ಪ್ರಿಂಗರ್(11 ಎಸೆತಗಳಲ್ಲಿ 4 ಸಿಕ್ಸರ್, 2 ಬೌಂಡರಿ ಸಮೇತ 35) ಹೋರಾಟ ನಡೆಸಿದರೂ ವಿಜಯಲಕ್ಷ್ಮಿ ಒಲಿಯಲಿಲ್ಲ. ಭಾರತದ ಪರ ಅರ್ಷದೀಪ್ ಸಿಂಗ್ 3, ನಮನ್ ಧೀರ್ 2 ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಬಿರುಸಿನ 69 ರನ್ಗಳನ್ನು ಸಿಡಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು.ಅಭಿಷೇಕ್ 6 ಬೌಂಡರಿ, 5 ಸಿಕ್ಸರ್ ಸಿಡಿಸಿದರು. ಅಭಿಷೇಕ್ ಶರ್ಮಾ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಕಡಿಮೆ ಎಸೆತಗಳನ್ನು (1,024) ಎದುರಿಸಿ 2,000 ರನ್ಗಳನ್ನು ಪೂರೈಸಿದ ವಿಶ್ವದ ನಂ.1 ಬ್ಯಾಟರ್ ಎಂಬ ಹೆಗ್ಗಳಿಗೆ ಇವರು ಪಾತ್ರರಾಗಿದ್ದಾರೆ. ಇಲ್ಲಿಯವರೆಗೂ ಈ ದಾಖಲೆ ಸೂರ್ಯಕುಮಾರ್ ಯಾದವ್ (1,164 ಎಸೆತಗಳು) ಹೆಸರಿನಲ್ಲಿತ್ತು.
ಸಂಜು ಸ್ಯಾಮ್ಸನ್ ಕೇವಲ 3 ರನ್ ಗಳಿಸಿ (6 ಎಸೆತ) ಬೇಗನೇ ಔಟಾಗಿ ನಿರಾಸೆ ಮೂಡಿಸಿದರು. ಅವರ ವಿಕೆಟ್ ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದ ಇಶಾನ್ ಕಿಶನ್ ಅವರು ಅಭಿಷೇಕ್ ಶರ್ಮಾ ಅವರೊಂದಿಗೆ ಸೇರಿಕೊಂಡು ವೆಸ್ಟ್ ಇಂಡೀಸ್ ಬೌಲಿಂಗ್ ವಿಭಾಗವನ್ನು ಅಕ್ಷರಶಃ ಚೆಂಡಾಡಿದರು. ಈ ಜೋಡಿಯು ಕೇವಲ 40 ಎಸೆತಗಳಲ್ಲಿ ಭರ್ಜರಿ 108 ರನ್ಗಳ ಅಮೂಲ್ಯ ಜೊತೆಯಾಟ ನಡೆಸಿತು. ಕಿಶನ್(37), ತಿಲಕ್ ವರ್ಮ(28), ನಿತೀಶ್ ರೆಡ್ಡಿ(21), ಅಕ್ಷರ್ ಪಟೇಲ್(20) ರನ್ ಬಾರಿಸಿದರು. ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್, ಶಮರ್ ಜೋಸೆಫ್ ಮತ್ತು ಶಮರ್ ಸ್ಪ್ರಿಂಗರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ತಲಾ ಎರಡು ವಿಕೆಟ್ಗಳನ್ನು ಪಡೆದು ಮಿಂಚಿದರು.








