ಮಂಗಳೂರು: ಮಂಗಳೂರು ದಸರಾ ಮಹೋತ್ಸವಕ್ಕೆ ಭಾನುವಾರ ಚಾಲನೆ ದೊರೆಯಿತು.ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದರ್ಬಾರ್ ಸಭಾಂಗಣದಲ್ಲಿ ನವರಾತ್ರಿ ಪ್ರಯುಕ್ತ ಶ್ರೀಶಾರದೆ, ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ, ಹಾಗೂ
ಗಣಪತಿ ಹಾಗೂ ಆದಿಶಕ್ತಿ ವಿಗ್ರಹಗಳ ಪ್ರತಿಷ್ಠಾಪನೆ ಭಾನುವಾರ ನೆರವೇರಿತು.ಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, ಕಲಶ ಪ್ರತಿಷ್ಠಾಪನೆ ಮತ್ತು ಇತರ ಧಾರ್ಮಿಕ ವಿಧಿಗಳು ನಡೆದವು. ಶ್ರೀಶಾರದಾ ದೇವಿಗೆ ಮಧ್ಯಾಹ್ನ ಹಾಗೂ ಸಂಜೆ ಪುಷ್ಪಾಲಂಕಾರ ನಡೆದವು.ಇದಕ್ಕೂ ಮುನ್ನ ಮಂಗಳ ವಾದ್ಯಗಳೊಂದಿಗೆ ವೀಣಾ ಪಾಣಿ ಶ್ರೀ ಶಾರದೆಯ ಮೂರ್ತಿಯನ್ನು ಶ್ರೀಕ್ಷೇತ್ರದ ಸಭಾಂಗಣಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ನೂರಾರು ಭಕ್ತರು ಜಯ ಘೋಷ ಮೊಳಗಿಸಿದರು.ಈ ಸಂದರ್ಭ ಮೊಳಗಿದ ಚೆಂಡೆ ಹಾಗೂ ತಾಸೆ ಪಟ್ಟಿನ ಸದ್ದು ಹಬ್ಬದ ವಾತಾವರಣವನ್ನು ನಿರ್ಮಿಸಿತು. ಹುಲಿ ವೇಷ ಕುಣಿತ ವಿಶೇಷ
ಆಕರ್ಷಣೆಯಾಗಿತ್ತು.ನವರಾತ್ರಿ, ದಸರಾ ಮಹೋತ್ಸವಕ್ಕೆ ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಅವರು ದೀಪ ಬೆಳಗಿ ಚಾಲನೆ ನೀಡಿದರು. ಶಾಸಕ ಡಿ.ವೇದವ್ಯಾಸ ಕಾಮತ್, ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ದಕ್ಷಿಣ ಕನ್ನಡ ಜಿಲ್ಲಾಕಾರಿ ದರ್ಶನ್ ಎಚ್., ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಕ್ಷೇತ್ರದ ಆಡಳಿತ ಮಂಡಳಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಖಜಾಂಚಿ ಪದ್ಮರಾಜ್ ಆರ್.ಪೂಜಾರಿ, ಕ್ಷೇತ್ರದ ಆಡಳಿತ ಮಂಡಳಿ ಟ್ರಸ್ಟಿಗಳು, ಸದಸ್ಯರು ಮೊದಲಾದವು ಭಾಗವಹಿಸಿದ್ದರು.








