ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲೆಂಡ್ ಹಾಗೂ ಭಾರತ ನಡುವಣ ಇಲ್ಲಿನ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವು ಡ್ರಾ ಫಲಿತಾಂಶದಲ್ಲಿ ಅಂತ್ಯಗೊಂಡಿದೆ.ಐದನೇ ಹಾಗೂ ಅಂತಿಮ ದಿನದಾಟದಲ್ಲಿ ದಿಟ್ಟ ಹೋರಾಟ ತೋರಿದ ಕಿವೀಸ್ ಬ್ಯಾಟರ್ಗಳು ಭಾರತಕ್ಕೆ ಜಯವನ್ನು ನಿರಾಕರಿಸಿದರು.ಈ ಪಂದ್ಯದುದ್ಧಕ್ಕೂ
ಟೀಂ ಇಂಡಿಯಸ ಅಧಿಪತ್ಯ ಮೆರೆದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಎರಡನೇ ಟೆಸ್ಟ್ ಪಂದ್ಯ ಇತ್ತಂಡಗಳ ಪಾಲಿಗೂ ನಿರ್ಣಾಯಕವೆನಿಸಿದೆ.ಅಂತಿಮ ದಿನದಾಟದಲ್ಲಿ ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್ನಲ್ಲಿ 120 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತು. ಪಂದ್ಯದಲ್ಲಿ ಫಲಿತಾಂಶ ಕಾಣುವುದು ಕಷ್ಟಕರವೆನಿಸಿದಾಗ ಉಭಯ ತಂಡದ ನಾಯಕರು ಪಂದ್ಯ ಡ್ರಾದಲ್ಲಿ ಅಂತ್ಯಗೊಳಿಸಲು ನಿರ್ಧರಿಸಿದರು.ನ್ಯೂಜಿಲೆಂಡ್ ಪರ ದಿಟ್ಟ ಹೋರಾಟ ತೋರಿದ ಡೆರಿಲ್ ಮಿಚೆಲ್ 186 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದರು, ಗ್ಲೆನ್ ಫಿಲಿಪ್ಸ್ 126 ಎಸೆತಗಳಲ್ಲಿ 26 ರನ್ ಗಳಿಸಿ ಔಟಾಗದೆ ಉಳಿದರು.ನಾಲ್ಕನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ಎರಡು ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು. ಇಂದು ಡೆವೊನ್ ಕಾನ್ವೇ 65 ಹಾಗೂ ರಚಿನ್ ರವೀಂದ್ರ 37 ಮತ್ತು ಟಾಮ್ ಬ್ಲಂಡೆಲ್ 15 ರನ್ ಗಳಿಸಿ ಔಟ್ ಆದರು.ಭಾರತದ ಪರ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಎರಡು ಮತ್ತು ಜಸ್ಪ್ರೀತ್ ಬೂಮ್ರಾ, ಅಂಶುಲ್ ಕಂಬೋಜ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಗಳಿಸಿದರು.ಹೆನ್ರಿ ನಿಕೋಲ್ಸ್ (175) ಹಾಗೂ ಗ್ಲೆನ್ ಫಿಲಿಪ್ಸ್ (118) ಶತಕಗಳ ನೆರವಿನಿಂದ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ನಲ್ಲಿ 368 ರನ್ ಗಳಿಸಿತ್ತು.ಇದಕ್ಕೆ ಉತ್ತರವಾಗಿ ಭಾರತ, ಕೆ.ಎಲ್. ರಾಹುಲ್ (136) ಹಾಗೂ ರಿಷಭ್ ಪಂತ್ (128) ಅಮೋಘ ಶತಕ ಹಾಗೂ ಯಶಸ್ವಿ ಜೈಸ್ವಾಲ್ (85), ನಾಯಕ ಶುಭಮನ್ ಗಿಲ್ (98) ಹಾಗೂ ಧ್ರುವ್ ಜುರೇಲ್ (78) ಅರ್ಧಶತಕಗಳ ಬೆಂಬಲದೊಂದಿಗೆ ಒಂಬತ್ತು ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು.
















