ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿ ತಂಡದ ನಾಯಕ ಪ್ರಿಯಾಂಶ್ ಆರ್ಯ ಅವರು ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ತಮಿಳುನಾಡು ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 68 ಎಸೆತಗಳನ್ನು ಎದುರಿಸಿದ ಪ್ರಿಯಾಂಶ್, ಬರೋಬ್ಬರಿ
181 ರನ್ಗಳ ಇನ್ನಿಂಗ್ಸ್ ದಾಖಲಿಸುವ ಮೂಲಕ ಪುರುಷರ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೊಸ ದಾಖಲೆ ಬರೆದಿದ್ದಾರೆ.ಅಷ್ಟೇ ಅಲ್ಲದೆ, ವಿಶ್ವ ಕ್ರಿಕೆಟ್ನ ದಿಗ್ಗಜ ಕ್ರಿಸ್ ಗೇಲ್ ಅವರ 175 ರನ್ಗಳ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.ವಿಶ್ವ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದು ಎರಡನೇ ಅತಿ ದೊಡ್ಡ ವೈಯಕ್ತಿಕ ಸ್ಕೋರ್ ಆಗಿ ದಾಖಲಾಗಿದೆ. ಕಳೆದ ತಿಂಗಳು ದಕ್ಷಿಣ ಆಫ್ರಿಕಾದ ಲುವಾನ್-ಡ್ರೆಪ್ರಿಟೋರಿಯಸ್ ಗಳಿಸಿದ್ದ 188 ರನ್ಗಳ ವಿಶ್ವದಾಖಲೆಯನ್ನು ಮುರಿಯಲು ಪ್ರಿಯಾಂಶ್ ಅವರಿಗೆ ಕೇವಲ 7 ರನ್ಗಳಷ್ಟೇ ಬಾಕಿಯಿತ್ತು.ಇಂದೋರ್ನ ಡಾಲಿ ಕಾಲೇಜ್ ಮೈದಾನದಲ್ಲಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡಕ್ಕೆ ಆರಂಭಿಕನಾಗಿ ಕಣಕ್ಕಿಳಿದ ಪ್ರಿಯಾಂಶ್ ಆರ್ಯ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡಿದರು. ಅವರ ಅಬ್ಬರದ ಪರಿಣಾಮ ಪವರ್ಪ್ಲೇ ಅಂತ್ಯಕ್ಕೆ ದೆಹಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 94 ರನ್ ಕಲೆಹಾಕಿತು. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಆರ್ಯ, ನಂತರದ 18 ಎಸೆತಗಳಲ್ಲೇ ಅಂದರೆ ಕೇವಲ 36 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಮೂರನೇ ಟಿ20 ಶತಕವನ್ನು ಪೂರೈಸಿದರು.ಶತಕದ ಬಳಿಕವೂ ತಮ್ಮ ಆರ್ಭಟ ಮುಂದುವರಿಸಿದ ಅವರು, ಮುಂದಿನ 24 ಎಸೆತಗಳಲ್ಲಿ 150 ರನ್ಗಳ ಮೈಲಿಗಲ್ಲನ್ನು ದಾಟಿದರು. ತಮ್ಮ ಇಡೀ ಇನ್ನಿಂಗ್ಸ್ನಲ್ಲಿ ಪ್ರಿಯಾಂಶ್ ಬರೋಬ್ಬರಿ 19 ಭರ್ಜರಿ ಸಿಕ್ಸರ್ಗಳು ಹಾಗೂ 7 ಬೌಂಡರಿಗಳನ್ನು ಬಾರಿಸಿದರು.ಪ್ರಿಯಾಂಶ್ ಆರ್ಯ ಅವರ ಈ ವಿನಾಶಕಾರಿ ಬ್ಯಾಟಿಂಗ್ ನೆರವಿನಿಂದ ದೆಹಲಿ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 275 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು.
















