ಸುಳ್ಯ:ರೈತರ ಪ್ರಮುಖ ಬೇಡಿಕೆಗಳಾದ ಶೂನ್ಯ ಬಡ್ಡಿದರದ ಬೆಳೆ ಸಾಲದ ಮಿತಿ ಹೆಚ್ಚಳದ ಸಮರ್ಪಕ ಅನುಷ್ಠಾನ ಹಾಗೂ ದೋಷಪೂರಿತ ಮಳೆ ಮಾಪನ ಕೇಂದ್ರಗಳ ದುರಸ್ತಿಗೆ ಆಗ್ರಹಿಸಿ ಸುಳ್ಯದ ‘ಕೃಷಿಕರ ಹಿತರಕ್ಷಣಾ ವೇದಿಕೆ’ಯ ನಿಯೋಗವು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಿತು. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ
ಈ ವಿಷಯಗಳನ್ನು ಸದನದ ಗಮನಕ್ಕೆ ತಂದು ಸರ್ಕಾರದಿಂದ ಸೂಕ್ತ ಕ್ರಮ ಕೊಡಿಸುವಂತೆ ವೇದಿಕೆಯ ಸಂಚಾಲಕ ಕೃಷ್ಣಪ್ರಸಾದ್ ಮಡ್ತಿಲ ನೇತೃತ್ವದ ನಿಯೋಗ ಮನವಿ ಸಲ್ಲಿಸಿದರು.ಶೂನ್ಯ ಬಡ್ಡಿದರದ ಅಲ್ಪಾವಧಿ ಬೆಳೆ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷ ಏರಿಸಿರುವ ಬಗ್ಗೆ ಕ್ಷೇತ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಇದರ ಅನುಷ್ಠಾನದ ಬಗ್ಗೆ ರೈತರಿಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸಂಬಂಧಪಟ್ಟ ಇಲಾಖೆ ಮತ್ತು ಸಹಕಾರ ಸಂಘಗಳಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು. ಸುಳ್ಯ, ಕಡಬ ಹಾಗೂ
ಪುತ್ತೂರು ಭಾಗಗಳ ಬೆಳೆ ವಿಮೆ ಹಾಗೂ ಹವಾಮಾನ ಆಧಾರಿತ ಬೆಳೆ ಪರಿಹಾರ ಯೋಜನೆಗಳಿಗೆ ಸ್ಥಳೀಯ ಮಳೆ ಮಾಪನ ಕೇಂದ್ರಗಳ ದತ್ತಾಂಶವೇ ಆಧಾರವಾಗಿದೆ. ಆದರೆ ಮಳೆ ಮಾಪನ ಯಂತ್ರಗಳು ದೋಷಪೂರಿತವಾಗಿರುವುದರಿಂದ ನಿಖರ ಮಳೆ ಪ್ರಮಾಣ ದಾಖಲಾಗುತ್ತಿಲ್ಲ. ಇದರಿಂದ ಬೆಳೆ ಹಾನಿಯಾದಾಗ ರೈತರಿಗೆ ನ್ಯಾಯಯುತ ವಿಮಾ ಪರಿಹಾರ ಸಿಗದೆ ಅನ್ಯಾಯವಾಗುತ್ತಿದೆ. ಆದ್ದರಿಂದ ಸುಳ್ಯ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಮಳೆ ಮಾಪನ ಕೇಂದ್ರಗಳನ್ನು ಪರಿಶೀಲಿಸಿ ಕೆಟ್ಟುಹೋಗಿರುವ ಯಂತ್ರಗಳನ್ನು ತಕ್ಷಣ ದುರಸ್ತಿಪಡಿಸಬೇಕು ಹಾಗೂ ಅಗತ್ಯವಿರುವೆಡೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊಸ ಸ್ವಯಂಚಾಲಿತ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಿ ನಿಖರ ದತ್ತಾಂಶ ದೊರೆಯುವಂತೆ ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಮಾನವ-ಆನೆ ಸಂಘರ್ಷ ತಡೆಗೆ ಸೂಕ್ತ ಕೃಮಕ್ಕೆ ಸರಕಾರವನ್ನು ಒತಾಯಿಸಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ನಂದಕುಮಾರ್, ಮೋಹನ್ ಬೋಳುಗುಡ್ಡೆ, ಗಣೇಶ್ ಭಜಂತಡ್ಕ ಮಡ್ತಿಲ, ಗಣೇಶ್ ಕೊಚ್ಚಿ, ನಿಖಿಲ್ ಮಾಡ್ತಿಲ, ಮುರಳೀಧರ ಕೊಚ್ಚಿ ಹಾಗೂ ಕಿಶನ್ ಜಬಳೆ ಇದ್ದರು.















