ಅಡಿಲೇಡ್: ಐಸಿಸಿ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ತಂಡದ ವಿರುದ್ಧ 5 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತದ ಸೆಮಿಫೈನಲ್ ನಿರೀಕ್ಷೆ ಗರಿಗೆದರಿದೆ.ಬಾಂಗ್ಲಾ ಗೆಲುವಿಗೆ ಭಾರತ 185 ರನ್‌ಗಳ ಸವಾಲಿನ ಗುರಿ ನೀಡಿತ್ತು. ದಿಟ್ಟ ಉತ್ತರ ನೀಡಿದ ಬಾಂಗ್ಲಾ 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿತು. ಈ ಸಂದರ್ಭದಲ್ಲಿ ಮಳೆ ಅಡ್ಡಿ ಪಡಿಸಿತು. ಬಳಿಕ ಡಕ್ ವರ್ತ್ ಲೂಯೀಸ್ ನಿಯಮದಂತೆ ಬಾಂಗ್ಲಾ ಗೆಲುವಿಗೆ
16 ಓವರ್‌ಗಳಲ್ಲಿ 151 ರನ್ ಗುರಿ ನಿಗದಿಪಡಿಸಲಾಯಿತು. ಭರ್ಜರಿ ಹೋರಾಟ ನೀಡಿದ ಬಾಂಗ್ಲಾ 16 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ145 ರನ್ ಗಳಿಸಿ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಬಾಂಗ್ಲಾ ಪರ ಲಿಟನ್‌ದಾಸ್ 21 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರು. 27 ಎಸೆತಗಳಲ್ಲಿ 60 ರನ್ ಗಳಿಸಿದ ದಾಸ್ ಕೆ.ಎಲ್.ರಾಹುಲ್ ಅದ್ಭುತ ತ್ರೋಗೆ ರನೌಟ್ ಆದರು. ಭಾರತದ ಪರ ಹರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಹಾಗು ಮಹಮ್ಮದ್ ಶಮಿ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ (64) ಹಾಗೂ ಕೆ.ಎಲ್. ರಾಹುಲ್ (50) ಅಮೋಘ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.
ಮಗದೊಮ್ಮೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ 44 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 64 ರನ್ ಗಳಿಸಿ ಔಟಾಗದೆ ಉಳಿದರು. . ಅಲ್ಲದೆ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗೆ ಭಾಜನರಾದರು.
ಮತ್ತೊಂದೆಡೆ ಫಾರ್ಮ್‌ಗೆ ಮರಳಿದ ಕೆ.ಎಲ್.ರಾಹುಲ್ 50 ರನ್ ಗಳಿಸಿದರು.32 ಎಸೆತಗಳನ್ನು ಎದುರಿಸಿದ ರಾಹುಲ್ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸಿದರು. ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ 30 ರನ್ ಸಿಡಿಸಿದರು. ಈ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮವಾಗಿದೆ. 4 ಪಂದ್ಯಗಳಲ್ಲಿ 3 ಗೆಲುವು ಒಂದು ಸೋಲು ಕಂಡಿರುವ ಭಾರತ 6 ಅಂಕ ಗಳಿಸಿದೆ.ನ.6 ರಂದು ಭಾರತ ಜಿಂಬಾಬ್ವೆ ವಿರುದ್ಧ ಆಡಲಿದೆ.