ಮ್ಯಾಂಚೆಸ್ಟರ್: ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕ ಮತ್ತು ಜೆಮಿಮಾ ರೊಡ್ರಿಗಸ್ ಅವರ ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ ಭಾರತ 137 ರನ್ಗಳ ಗುರಿಯನ್ನು ಸುಲಭವಾಗಿ
ತಲುಪಿತು.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಪರ ಜುವೈರಿಯಾ ಫರ್ದೌಸ್ 33 ರನ್, ನಾಯಕಿ ನಿಗಾರ್ ಸುಲ್ತಾನಾ ಜೊತಿ 32 ರನ್ ಸೇರಿಸಿದರು. ಬಾಂಗ್ಲಾ ಪಡೆ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ಗಳ ಸಾಧಾರಣ ಮೊತ್ತವನ್ನಷ್ಟೇ ಕಲೆಹಾಕಿತು. ಭಾರತದ ಪರ ಮಾರಕ ಸ್ಪಿನ್ ದಾಳಿ ನಡೆಸಿದ ರಾಧಾ ಯಾದವ್ 28 ರನ್ ನೀಡಿ 3 ವಿಕೆಟ್ ಕಸಿದರೆ, ಶ್ರೀ ಚರಣಿ 21 ರನ್ ನೀಡಿ 2 ವಿಕೆಟ್ ಪಡೆದರು.
137 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಸ್ಮೃತಿ ಮಂಧಾನ (8) ವಿಕೆಟ್ ಕಳೆದುಕೊಂಡು ಆಘಾತ ಎದುರಾಯಿತು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಬಾಂಗ್ಲಾ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಕೇವಲ 34 ಎಸೆತ ಎದುರಿಸಿದ ಶಫಾಲಿ, 8 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಸಿಡಿಸಿ 53 ರನ್ ಚೆಚ್ಚಿದರು.ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಜೆಮಿಮಾ ರೊಡ್ರಿಗಸ್ ಕೇವಲ 15 ಎಸೆತಗಳಲ್ಲಿ 26 ರನ್ಗಳ ಅತ್ಯಮೂಲ್ಯ ಇನ್ನಿಂಗ್ಸ್ ಆಡುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 16.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ವಿಜಯದ ನಗೆ ಬೀರತು.
ಈ ಸೋಲಿನೊಂದಿಗೆ ಬಾಂಗ್ಲಾದೇಶ ತಂಡವು ಟೂರ್ನಿಯಿಂದ ಹೊರಬಿದ್ದಿದೆ.ಭಾರತ ತಂಡವು ಸೆಮಿಫೈನಲ್ಗೆ ಅಧಿಕೃತವಾಗಿ ಅರ್ಹತೆ ಪಡೆಯಬೇಕಾದರೆ, ಭಾನುವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಲೇಬೇಕಾದ ಅನಿವಾರ್ಯತೆ ಇದೆ.






