ನವದೆಹಲಿ:ಮಧ್ಯಪ್ರಾಚ್ಯದ ಬಿಕ್ಕಟ್ಟು ತಿಳಿಯಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ವಾಣಿಜ್ಯ ಮತ್ತು ಕೈಗಾರಿಕಾ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಈ ನಿರ್ಧಾರದಿಂದಾಗಿ ಹೋಟೆಲ್ ಮತ್ತು ಕೈಗಾರಿಕಾ ವಲಯಕ್ಕೆ ರಷ್ಟು ಗ್ಯಾಸ್ ಪೂರೈಕೆ ಸುಗಮವಾಗಲಿದೆ. ಯುದ್ಧದ ಹಿನ್ನೆಲೆಯಲ್ಲಿ
ಸರ್ಕಾರವು ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಿತ್ತು ಮತ್ತು ಅದರ ಪೂರೈಕೆಯ ಮೇಲೂ ಕೆಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿತ್ತು. ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಿಗದೇ ಕೆಲವು ದಿನಗಳ ಕಾಲ ಹೋಟೆಲ್ ಉದ್ಯಮಿಗಳು ತಮ್ಮ ಹೋಟೆಲ್ಗಳನ್ನೇ ಮುಚ್ಚಬೇಕಾದ ಪರಿಸ್ಥಿತಿ ಬಂದೊದಗಿತ್ತು. ಅಲ್ಲದೆ ಗೃಹಬಳಕೆಯ ಎಲ್ಪಿಜಿ ಗ್ರಾಹಕರು ಸಹ ಸಿಲಿಂಡರ್ಗಾಗಿ ಕ್ಯೂ ನಿಲ್ಲಬೇಕಾಗಿತ್ತು. ಆದರೆ ಈಗ ಅಮೆರಿಕ ಮತ್ತು ಇರಾನ್ ನಡುವೆ ಸಂಪೂರ್ಣ ಕದನ ವಿರಾಮ ಘೋಷಣೆಯಾಗಿದೆ. ಹೋರ್ಮುಜ್ ಕಡಲ ಮಾರ್ಗವನ್ನು ಮತ್ತೊಮ್ಮೆ ಸಂಚಾರಕ್ಕಾಗಿ ಮುಕ್ತಗೊಳಿಸಲಾಗಿದೆ. ಈ ಮಾರ್ಗ
ಮುಕ್ತವಾಗುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಸರ್ಕಾರವು ವಾಣಿಜ್ಯ ಎಲ್ಪಿಜಿ ಗ್ಯಾಸ್ ವಿತರಣೆಯ ಮೇಲೆ ಹೇರಿದ್ದ ನಿರ್ಬಂಧಗಳನ್ನು ಈಗ ಹಿಂಪಡೆದಿದೆ.
ಮೊದಲಿನ ರೀತಿಯಲ್ಲಿ ಎಲ್ಪಿಜಿ ಗ್ಯಾಸ್ ಪೂರೈಕೆಯನ್ನು ಮುಕ್ತವಾಗಿ ಮಾಡಲಾಗುತ್ತದೆ.ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ಹೋಟೆಲ್ ಉದ್ಯಮ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಆರ್ಥಿಕ ನಿರಾಳತೆ ಸಿಗಲಿದ್ದು, ಇನ್ಮುಂದೆ ನಿಯಮಿತವಾಗಿ ಸಿಲಿಂಡರ್ ಪೂರೈಕೆಯಾಗಲು ಹಾದಿ ಸುಗಮವಾಗಿದೆ.






