ಮುಲ್ಲನಪುರ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 300 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 8 ವಿಕೆಟ್ಗಳಿಗೆ 564 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅಫ್ಘಾನಿಸ್ತಾನ ಕೇವಲ 152 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಹೀಗಾಗಿ ಮೊದಲ ಇನ್ನಿಂಗ್ಸ್ನಲ್ಲಿ
412 ರನ್ಗಳ ಮುನ್ನಡೆ ಸಾಧಿಸಿದ್ದ ಭಾರತ, ಅಫ್ಘಾನ್ ತಂಡಕ್ಕೆ ಫಾಲೋ ಆನ್ ಹೇರಿತು.ಬಳಿಕ ಮತ್ತೆ ಬ್ಯಾಟಿಂಗ್ಗೆ ಇಳಿದ ಅಫ್ಘಾನಿಸ್ತಾನ ಕೇವಲ 112 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಮತ್ತು 300 ರನ್ಗಳ ಹೀನಾಯ ಸೋಲನ್ನು ಅನುಭವಿಸಿದೆ. ಫಾಲೋ ಆನ್ ಬಳಿಕ ಎರಡನೇ ಇನ್ನೀಂಗ್ಸ್ನಲ್ಲಿ 35.5 ಓವರ್ಗಳಲ್ಲಿಯೇ 112 ರನ್ಗಳಿಗೆ ಆಲ್ ಔಟ್ ಆಗಿ ಅಫ್ಘಾನ್ ಸೋಲಿಗೆ ಶರಣಾಯಿತು. ಸೆಡಿಕುಲ್ಲಾ ಅಟಲ್ 42, ರಹಮಾನುಲ್ಲಾ ಗುರ್ಬಾಜ್ 24 ಮತ್ತು ರಹಮತ್ ಶಾ 13 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವೊಬ್ಬ ಆಟಗಾರನೂ ಎರಡಂಕಿ ಮೊತ್ತ ತಲುಪಲಿಲ್ಲ.
ಭಾರತದ ಪರ ವಾಷಿಂಗ್ಟನ್ ಸುಂದರ 36ಕ್ಕೆ 4 ವಿಕೆಟ್, ಕುಲದೀಪ್ ಯಾದವ್ 30ಕ್ಕೆ 3 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ನಲ್ಲಿ ಮಾನವ್ ಸುತಾರ್ ಕೇವಲ 33 ರನ್ಗಳಿಗೆ 6 ವಿಕೆಟ್ ಉರುಳಿಸಿ ಮಿಂಚಿದರು. ಇನ್ನು ಪ್ರಸಿದ್ಧ ಕೃಷ್ಣ 37ಕ್ಕೆ 3 ವಿಕಟ್ ಪಡೆದರು.













