ಕಲ್ಲಪಳ್ಳಿ: ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಕೇರಳ- ಕರ್ನಾಟಕ ಗಡಿ ಪ್ರದೇಶವಾದ ಕಮ್ಮಾಡಿಯ 10 ಕುಟುಂಬಗಳಿಗೆ ಸರಕಾರ ನಿರ್ಮಿಸಿದ 10 ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮ ಜೂ.21ರಂದು ನಡೆಯಿತು.ಕೇರಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವರಾದ ಓ. ಆರ್. ಕೇಳು ಕೀ ಹಸ್ತಾಂತರ ಮಾಡಿದರು. ಕಾಞಂಗಾಡ್ ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.ಕುಡಿಯುವ ನೀರಿನ ಯೋಜನೆಯನ್ನು
ಪರಪ್ಪ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಲಕ್ಷ್ಮಿ ಉದ್ಘಾಟಿಸಿದರು. ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್, ಉಪಾಧ್ಯಕ್ಷ
ಪಿ.ಎಂ.ಕುರಿಯಾಕೋಸ್,ಪರಪ್ಪ ಬ್ಲಾಕ್ ಪಂಚಾಯತ್
ಸದಸ್ಯರಾದ ಅರುಣ್ ರಂಗತ್ತಮಲೆ, ಲತಾ ಅರವಿಂದನ್, ಪನತ್ತಡಿ ಗ್ರಾಮ ಪಂಚಾಯತ್ ಸದಸ್ಯರಾದ ಎಂ. ಪದ್ಮಕುಮಾರಿ, ಸುಪ್ರಿಯಾ ಶಿವದಾಸ್ ಮಾತನಾಡಿದರು. ಸ್ವಾಗತ ಸಮಿತಿಯ ಸಂಚಾಲಕರು ಪನತ್ತಡಿ ಗ್ರಾಮ ಪಂಚಾಯಿತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ವಂದಿಸಿದರು. ಗೃಹ ನಿರ್ಮಾಣ ಮಾಡಿದ ಗಂಗಾಧರ ಹಾಗೂ ಸಹಕರಿಸಿದ ವಿ.ಎಂ.ಜೋನ್ ಮತ್ತು ಲಕ್ಷ್ಮಿ ಬಾಯಿ ಇವರನ್ನು ಗೌರವಿಸಲಾಯಿತು.

ಪನತ್ತಡಿ ಪಂಚಾಯತ್ನ ಆರನೇ ವಾರ್ಡ್ ಕಲ್ಲಪಳ್ಳಿ ಬಾಟೋಳಿಯ ಪತ್ತು ಕುಡಿ ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಪಂಗಡ ಪುನರ್ವಸತಿ ಮಿಷನ್ ಅಡಿಯಲ್ಲಿ 10 ಮನೆಗಳನ್ನು ನಿರ್ಮಿಸಲಾಗಿದೆ.
ಪನತ್ತಡಿ ಗ್ರಾಮ ಪಂಚಾಯತ್ನ ಆರನೇ ವಾರ್ಡ್ನಲ್ಲಿರುವ ಕಮ್ಮಾಡಿಯ ಕೆಲವು ಭಾಗಗಳು ನೈಸರ್ಗಿಕ ವಿಕೋಪ ಪೀಡಿತ ಪ್ರದೇಶವಾಗಿದ್ದು, ಪ್ರತಿ ಮಳೆಗಾಲದಲ್ಲಿ ಭೂ ಕುಸಿತ ಮತ್ತಿತರ ಪ್ರಾಕೃತಿಕ ವಿಕೋಪದಿಂದ ಇಲ್ಲಿನ ಜನರ ಜೀವನ ದುಸ್ತರವಾಗುತ್ತಿತ್ತು. ಆದುದರಿಂದ ಇಲ್ಲಿನ ಕುಟುಂಬಗಳನ್ನು ಕಲ್ಲಪಳ್ಳಿಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ ಈ ಪ್ರದೇಶದಿಂದ 10 ಪರಿಶಿಷ್ಟ ಪಂಗಡದ ಕುಟುಂಬಗಳನ್ನು ಕಲ್ಲಪಳ್ಳಿಗೆ ಸ್ಥಳಾಂತರಿಸಲು ನಿರ್ಧರಿಸಿ ಅವರಿಗೆ 6 ಸೆಂಟ್ಸ್ ಭೂಮಿಯನ್ನು ಒದಗಿಸಿ, ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ವತಿಯಿಂದ ಮನೆ ನಿರ್ಮಾಣಕ್ಕಾಗಿ ತಲಾ 6 ಲಕ್ಷ ರೂ. ಗಳನ್ನು ಮಂಜೂರು ಮಾಡಿ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಿತು.