ಲೀಡ್ಸ್: ಲೀಡ್ಸ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಶುಭ್ಮನ್ ಗಿಲ್, ರಿಷಬ್ ಪಂತ್ ಶತಕಗಳ ನೆರವಿನಿಂದ ಭಾರತ 471 ರನ್ ಗಳಿಸಿತು. ಪ್ರತಿಯಾಗಿ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿದರೂ, ಓಲ್ಲಿ ಪೋಪ್ ಅವರ ಶತಕದ ನೆರವಿನಿಂದ 3 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿದೆ. ಇಂಗ್ಲೆಂಡ್ಗೆ ಒಲ್ಲಿ ಪೋಪ್ ಜವಾಬ್ದಾರಿಯುತ
ಆಟದ ಮೂಲಕ ತಂಡಕ್ಕೆ ಆಸರೆ ಒದಗಿಸಿದರು. ಒಲ್ಲಿ ಪೋಪ್ ಅಜೇಯ ಶತಕ (100*) ಭಾರಿಸಿದ್ದಾರೆ.ಶುಕ್ರವಾರ ಅರ್ಧಶತಕ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ರಿಷಬ್ ಪಂತ್ ಶನಿವಾರ ಆಟ ಮುಂದುವರಿಸಿ ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು. ಆ ಮೂಲಕ ಭಾರತ ತಂಡದ ಒಟ್ಟು ಮೂವರು ಬ್ಯಾಟರ್ಗಳು ಶತಕ ಗಳಿಸಿ ಗಮನ ಸೆಳೆದಂತಾಗಿದೆ.
ಮೊದಲ ದಿನದಾಟದಂದು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಬ್ಮನ್ ಗಿಲ್ ಶತಕ ದಾಖಲಿಸಿದ್ದರು.ಜೈಸ್ವಾಲ್ 159 ಎಸೆತಗಳಲ್ಲಿ 101 ರನ್ ಗಳಿಸಿದರೆ, ಗಿಲ್ 227 ಎಸೆತಗಳಲ್ಲಿ 147 ರನ್ ಗಳಿಸಿದರು. ಪಂತ್ 178 ಎಸೆತಗಳಿಂದ 134 ರನ್ ಸಿಡಿಸಿದರು.ಶುಬ್ಮನ್ ಗಿಲ್ ಮತ್ತು ರಿಷಬ್ ಪಂತ್ ನಾಲ್ಕನೇ ವಿಕೆಟ್ಗೆ 209 ರನ್ಗಳ ಪಾಲುದಾರಿಕೆ ನೀಡಿ ತಂಡವನ್ನು ಸುಸ್ಥಿತಿಗೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಅವರಿಬ್ಬರ ವಿಕೆಟ್ಗಳು ಪತನಗೊಂಡ ಬಳಿಕ ಭಾರತ ತಂಡ ನಾಟಕೀಯವಾಗಿ ಕುಸಿತ ಕಂಡಿತು. 28 ರನ್ಗಳ ಅಂತರದಲ್ಲಿ
ತನ್ನೆಲ್ಲಾ ವಿಕೆಟ್ಗಳನ್ನು ಭಾರತ ಕಳೆದುಕೊಂಡು ಮೊದಲ ಇನಿಂಗ್ಸ್ ಕೊನೆಗೊಳಿಸಿತು. ಕರುಣ್ ನಾಯರ್, ಬುಮ್ರಾ ಶೂನ್ಯಕ್ಕೆ ಔಟಾದರೆ, ರವೀಂದ್ರ ಜಡೇಜ 11 ರನ್ ಗಳಿಸಿದರು. ಉಳಿದ ಮೂವರು ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ಸೀಮಿತಗೊಂಡರು.
ಟೆಸ್ಟ್ ಮಾದರಿಯಲ್ಲಿ ಅತ್ಯಧಿಕ ಶತಕ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನು ಪಂತ್ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ಹಿಂದೆ ಆ ದಾಖಲೆ ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಹೆಸರಲ್ಲಿತ್ತು. ಅವರು 90 ಟೆಸ್ಟ್ ಪಂದ್ಯಗಳಲ್ಲಿ 6 ಶತಕಗಳನ್ನು ದಾಖಲಿಸಿದ್ದಾರೆ. ಶನಿವಾರ 100ನೇ ಓವರಿನ ಮೊದಲ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಮೂಲಕ ಪಂತ್ ಟೆಸ್ಟ್ ವೃತ್ತಿಜೀವನದ 7ನೇ ಶತಕ ದಾಖಲಿಸಿದರು. ಪಂತ್ ಈ ಸಾಧನೆಯನ್ನು 44 ಟೆಸ್ಟ್ ಪಂದ್ಯಗಳಲ್ಲಿ ಪೂರೈಸಿದ್ದಾರೆ.