ನವದೆಹಲಿ:ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದಾರೆ.ಹರ್ಮನ್ಪ್ರೀತ್ ಕೌರ್ 2016ರಲ್ಲಿ ಭಾರತ ಮಹಿಳಾ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದರು. 10 ವರ್ಷಗಳ ಕಾಲ
ಟಿ20 ತಂಡವನ್ನು ಮುನ್ನಡೆಸಿದ ಅವರು 2022ರಲ್ಲಿ ಏಕದಿನ ತಂಡಕ್ಕೆ ನಾಯಕಿಯಾಗುತ್ತಾರೆ. ಬಳಿಕ 2023ರಿಂದ ಮೂರೂ ಮಾದರಿಯ ತಂಡಕ್ಕೆ ನಾಯಕಿಯಾಗುತ್ತಾರೆ.ಅವರ ನಾಯಕತ್ವದ ಅವಧಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹಲವು ಮಹತ್ವದ ಮೈಲಿಗಲ್ಲುಗಳನ್ನು ತಲುಪಿದೆ.ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು 2025ರ ಮಹಿಳಾ ಏಕದಿನ ವಿಶ್ವಕಪ್ ಗೆಲುವು ಸಾಧಿಸಿತ್ತು. ಇದು ಕೌರ್ ಕ್ರಿಕೆಟ್ ವೃತ್ತಿ ಜೀವನದ ಪ್ರಮುಖ ಸಾಧನೆಯಾಗಿದೆ. ಮಹಿಳಾ ಕ್ರಿಕೆಟ್ನಲ್ಲಿ ಭಾರತಕ್ಕೆ ಐತಿಹಾಸಿಕ ವಿಶ್ವಕಪ್ ತಂದುಕೊಟ್ಟ ನಾಯಕಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇತ್ತೀಚೆಗೆ 2026ರ ಏಷ್ಯನ್ ಗೇಮ್ಸ್ನಲ್ಲೂ ಹರ್ಮನ್ಪ್ರೀತ್ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ ಟಿ20 ಕ್ರಿಕೆಟ್ನಲ್ಲಿ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದಿತ್ತು. ನನ್ನ ಕರ್ತವ್ಯವನ್ನು ಪೂರ್ಣಗೊಳಿಸಿದ್ದೇನೆ’‘ಇಂದು ನಾನು ಎಲ್ಲಾ ಸ್ವರೂಪದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ’ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು 37 ವರ್ಷದ ಕೌರ್ ಸಂದೇಶ ನೀಡಿದ್ದಾರೆ.
2026ರ ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ ತಲುಪಲು ವಿಫಲವಾದ ಬಳಿಕ ಹರ್ಮನ್ಪ್ರೀತ್ ಅವರ ನಾಯಕತ್ವದ ಬಗ್ಗೆ ಚರ್ಚೆ ಜೋರಾಗಿತ್ತು. ಅದಾದ ಬಳಿಕವೂ ಅವರನ್ನು ಏಷ್ಯನ್ ಗೇಮ್ಸ್ಗೆ ನಾಯಕಿಯಾಗಿ ಮುಂದುವರಿಸಲಾಗಿತ್ತು.
ಹರ್ಮನ್ಪ್ರೀತ್ ನಾಯಕತ್ವದಿಂದ ಹೊರಬಂದರೂ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣ ಮುಂದುವರೆಯಲಿದೆ. ಅವರು ಆಟಗಾರ್ತಿಯಾಗಿ ತಂಡದ ಭಾಗವಾಗುವ ನಿರೀಕ್ಷೆಯಿದೆ. ನಾಯಕತ್ವದ ಜವಾಬ್ದಾರಿಯಿಂದ ಮುಕ್ತವಾಗಿ ಬ್ಯಾಟಿಂಗ್ನತ್ತ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ.







