ಗಾಂಧಿನಗರ: ಗುಜರಾತ್ನ ಭೂಪೇಂದ್ರ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟವನ್ನು ಸಂಪೂರ್ಣವಾಗಿ ಪುನಾರಚಿಸಲಾಗಿದೆ. ಶುಕ್ರವಾರ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಹರ್ಷ್ ಸಾಂಘ್ವಿ ಅವರು ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಮತ್ತು 25 ಇತರರು ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ, ಸುಮಾರು ನಾಲ್ಕು
ವರ್ಷಗಳ ನಂತರ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಮತ್ತೆ ಸೃಷ್ಟಿಸಲಾಗಿದೆ.ಈ ಸಂಪುಟ ಪುನಾರಚನೆಯಲ್ಲಿ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದ್ದು, ಜಾಮ್ನಗರ ಉತ್ತರ ಕ್ಷೇತ್ರದ ಶಾಸಕಿ ಮತ್ತು ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಮೊದಲ ಬಾರಿಗೆ ಸಚಿವರಾಗಿರಾಗಿದ್ದಾರೆ.
ಇವರೊಂದಿಗೆ ಸ್ವರೂಪ್ಜಿ ಠಾಕೂರ್, ಪ್ರವೀಣ್ ಕುಮಾರ್ ಮಾಲಿ, ಋಷಿಕೇಶ್ ಪಟೇಲ್, ದರ್ಶನಾ ವಾಘೇಲಾ, ಕುವರ್ಜಿ ಬಾವಲಿಯಾ, ಅರ್ಜುನ್ ಮೋಧ್ವಾಡಿಯಾ, ಪರುಷೋತ್ತಮ್ ಸೋಲಂಕಿ, ಜಿತೇಂದ್ರ ವಘಾನಿ ಮತ್ತು ಪ್ರಫುಲ್ ಪನ್ಶೇರಿಯಾ ಸೇರಿದಂತೆ ಒಟ್ಟು 26 ಮಂದಿ ನೂತನ ಸಚಿವರ ಪಟ್ಟಿಯಲ್ಲಿದ್ದಾರೆ.ಸಂಪುಟ ವಿಸ್ತರಣೆಗೂ ಒಂದು ದಿನ ಮೊದಲು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಹೊರತುಪಡಿಸಿ, ಈ ಹಿಂದಿನ ಸಂಪುಟದಲ್ಲಿದ್ದ ಎಲ್ಲಾ 16 ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಹಿಂದಿನ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ ಒಟ್ಟು 17 ಮಂದಿ ಇದ್ದರು.ಇದೀಗ ಸಂಪುಟದ ಗಾತ್ರ 27ಕ್ಕೆ ಏರಿಕೆಯಾಗಿದೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಸಂವಿಧಾನದ ಪ್ರಕಾರ ಗರಿಷ್ಠ 27 ಸಚಿವರಿಗೆ ಅವಕಾಶವಿದೆ.















