ನವದೆಹಲಿ:ಗುರುವಾರ ರಾತ್ರಿ 4 ರಾಜ್ಯಗಳ 36 ಸ್ಥಳಗಳ ಮೇಲೆ ಡ್ರೋನ್ ಬಳಸಿ ಪಾಕಿಸ್ತಾನ ದಾಳಿಗೆ ಯತ್ನಿಸಿತ್ತು. ಇದನ್ನು ನಿಷ್ಕ್ರೀಯಗೊಳಿಸಿದ ಭಾರತ ಸೇನೆ ಇದಕ್ಕೆ ತಕ್ಕ ಪ್ರತ್ಯತ್ತರ ನೀಡಿದೆ ಎಂದು ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ಸೇನೆ ಮಾಹಿತಿ ನೀಡಿದೆ. ಸುದ್ದಿಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಭಾರತೀಯ ಸೇನೆಯ
ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಆಪರೇಷನ್ ಸಿಂಧೂರ್-2 ಬಗ್ಗೆ ಮಾಹಿತಿ ನೀಡಿದರು. ಪಾಕಿಸ್ತಾನ ಪಡೆಗಳು ಟರ್ಕಿಶ್ ಡ್ರೋನ್ಗಳನ್ನು ಬಳಸಿ 36 ಸ್ಥಳಗಳ ಮೇಲೆ ದಾಳಿಗೆ ಯತ್ನಿಸಿವೆ, ನಿನ್ನೆ ರಾತ್ರಿ ಭಾರತದ ಹಲವು ನಗರಗಳ ಮೇಲೆ ಡ್ರೋನ್ ದಾಳಿಗೆ ಯತ್ನ ನಡೆದಿದೆ. ಆ ಡ್ರೋನ್ ದಾಳಿ ಯತ್ನವನ್ನು ವಿಫಲಗೊಳಿಸಿದ್ದೇವೆ. ಭಾರತದ ಮೇಲೆ ಹಾರಿಸಿದ್ದ ಹಲವು ಡ್ರೋನ್ಗಳನ್ನು ಧ್ವಂಸಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಉರಿ, ಪೂಂಚ್, ಅಖ್ನೂರ್ ಸೇರಿ ಎಲ್ಒಸಿಯಲ್ಲಿ ಭಾರಿ ಗುಂಡಿನ ದಾಳಿ ನಡೆದಿದೆ. ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೂ ತಕ್ಕ ತಿರುಗೇಟು ನೀಡಿದ್ದೇವೆ. ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಪಾಕಿಸ್ತಾನದ ಸೇನೆಯ ದಾಳಿ ಯತ್ನ ವಿಫಲಗೊಳಿಸಲಾಗಿದೆ. ಪಾಕಿಸ್ತಾನದಿಂದ 300-400 ಡ್ರೋನ್ಗಳನ್ನು ಹಾರಿಸಲಾಗಿದೆ. ಮೇ 8 ಮತ್ತು ಮೇ 9ರ ಮಧ್ಯರಾತ್ರಿ ಪಾಕಿಸ್ತಾನಿ ಸೇನೆಯು ಪಶ್ಚಿಮ ಗಡಿಗಳಲ್ಲಿನ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು ಎಂದಿದ್ದಾರೆ. ಪಾಕಿಸ್ತಾನದ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಪಾಕಿಸ್ತಾನಕ್ಕೂ ನಷ್ಟ ಸಂಭವಿಸಿದೆ ಎಂದರು.