ವ್ಯಾಂಕೋವರ್: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸುವ ಮೂಲಕ ಈಜಿಪ್ಟ್ ಇತಿಹಾಸದ ಪುಟ ಸೇರಿದೆ. ‘ಜಿ’ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-1 ಗೋಲುಗಳ ರೋಚಕ ಗೆಲುವು ದಾಖಲಿಸಿದೆ.ಪಂದ್ಯದ ಮೊದಲಾರ್ಧದ ವೇಳೆ
ಈಜಿಪ್ಟ್ 0-1 ಗೋಲಿನ ಹಿನ್ನಡೆಯಲ್ಲಿತ್ತು. ಆದರೆ ದ್ವಿತಿಯಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ವಶಪಡಿಸಿಕೊಂಡಿತು.ಈಜಿಪ್ಟ್ ಪರ ಮೊಸ್ತಾಫಾ ಝಿಕೊ, ಮೊಹಮ್ಮದ್ ಸಲಾ ಹಾಗೂ ಟ್ರೆಜೆಗ್ಯೂಟ್, ಗೆಲುವಿನ ರೂವಾರಿಯೆನಿಸಿದರು. ಮತ್ತೊಂದೆಡೆ ನ್ಯೂಜಿಲೆಂಡ್ ಪರ ಫಿನ್ ಸರ್ಮ್ಯಾನ್ 15ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಹಾಲಿ ಚಾಂಪಿಯನ್ ಅರ್ಜೆಂಟೀನಾ ಇಂದು ರಾತ್ರಿ(ಭಾರತೀಯ ಕಾಲಮಾನ 10.30)ಕ್ಕೆ ಆಸ್ಟ್ರೀಯಾ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್ ನೆರವಿನಿಂದ ಅಲ್ಜೀರಿಯಾ ತಂಡವನ್ನು ಮಣಿಸಿದ ಅರ್ಜೆಂಟೀನಾ ಇಂದಿನ ಪಂದ್ಯ ಗೆದ್ದರೆ ನಾಕೌಟ್ ಹಂತ ಪ್ರವೇಶಿಸಲಿದೆ.







