ಆರ್ಲಿಂಗ್ಟನ್:ನಾಯಕ ಲಯೊನೆಲ್ ಮೆಸ್ಸಿ ಅವರ ಅಮೋಘ ಆಟದ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ 2–0 ಅಂತರದಿಂದ ಆಸ್ಟ್ರಿಯಾ ತಂಡವನ್ನು ಮಣಿಸಿ ಫಿಫಾ ವಿಶ್ವಕಪ್ ನಾಕೌಟ್ ಪ್ರವೇಶಿಸಿತು. ಲಯೊನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ
ಅತಿ ಹೆಚ್ಚು ಗೋಲು ಹೊಡೆದ ಆಟಗಾರನೆಂಬ ದಾಖಲೆ ಬರೆದರು. ಆಸ್ಟ್ರಿಯಾ ವಿರುದ್ಧದ ‘ಜೆ’ ಗುಂಪಿನ ಪಂದ್ಯದಲ್ಲಿ ಅವಳಿ ಗೋಲು ಬಾರಿಸುವುದರೊಂದಿಗೆ ವಿಶ್ವಕಪ್ನಲ್ಲಿ ಅವರ ಗೋಲುಗಳ ಸಂಖ್ಯೆ 18ಕ್ಕೆ ಏರಿಕೆಯಾಯಿತು. ಇದರೊಂದಿಗೆ ಜರ್ಮನಿಯ ಸ್ಟ್ರೇಕರ್ ಮಿರೋಸ್ಲಾವ್ ಕ್ಲೋಸ್ ಅವರ (16) ದಾಖಲೆಯನ್ನು ಮೀರಿನಿಂತರು.ಕಳೆದ ವಾರ ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿದ್ದ 38 ವರ್ಷ ವಯಸ್ಸಿನ ಮೆಸ್ಸಿ ಅವರು ಕ್ಲೋಸ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಎರಡು ಪಂದ್ಯಗಳಲ್ಲಿ ಒಟ್ಟು 5 ಗೋಲು ಗಳಿಸಿರುವ ಅವರು ಪ್ರಸಕ್ತ ಟೂರ್ನಿಯಲ್ಲಿ ‘ಅತ್ಯಧಿಕ ಸ್ಕೋರರ್’ ಎನಿಸಿದ್ದಾರೆ. ಪಂದ್ಯದ ಆರಂಭದಲ್ಲಿ ಲಭಿಸಿದ್ದ ಪೆನಾಲ್ಟಿ ಅವಕಾಶದಲ್ಲಿ ಎಡವಿದ್ದ ಮೆಸ್ಸಿ 38ನೇ ನಿಮಿಷದಲ್ಲಿ ಮೈಲಿಗಲ್ಲಿನ 17ನೇ ಗೋಲು ಹೊಡೆದರು. ಪಂದ್ಯದ ಕೊನೆಯ ಹೆಚ್ಚುವರಿ ಅವಧಿಯಲ್ಲಿ ಮತ್ತೊಮ್ಮೆ ಪರಾಕ್ರಮ ಮೆರೆದ ಮೆಸ್ಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.
ಇನ್ನೊಂದು ಪಂದ್ಯದಲ್ಲಿ ಕಿಲಿಯಾನ್ ಎಂಬಾಪೆ ಗಳಿಸಿದ ಎರಡು ಗೋಲುಗಳ ನೆರವಿನಿಂದ ಇರಾನ್ ವಿರುದ್ಧ 3-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಫ್ರಾನ್ಸ್, ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ. ಮಿಂಚಿನ ಆಟ ಪ್ರದರ್ಶಿಸಿದ ಎಂಬಾಪೆ, ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಜರ್ಮನಿಯ ಮಾಜಿ ಆಟಗಾರ ಮಿರೋಸ್ಲಾವ್ ದಾಖಲೆಯನ್ನು ಸರಿಗಟ್ಟಿದರು.
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ 14ನೇ ನಿಮಿಷದಲ್ಲಿ ಗೋಲು ಗಳಿಸಿದ ಎಂಬಾಪೆ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಪಂದ್ಯದ ದ್ವಿತೀಯಾರ್ಧದಲ್ಲಿ 54ನೇ ನಿಮಿಷದಲ್ಲಿ ಮತ್ತೆ ಕಾಲ್ಚಳಕ ತೋರಿದ ಎಂಬಾಪೆ ಎರಡನೇ ಗೋಲು ಬಾರಿಸಿದರು.ಬಳಿಕ ಪಂದ್ಯದ 66ನೇ ನಿಮಿಷದಲ್ಲಿ ಗೋಲು ಗಳಿಸಿದ ಔಸ್ಮಾನೆ ಡೆಂಬೆಲೆ ಗೋಲುಗಳ ಸಂಖ್ಯೆ ಏರಿಸಿದರು.ಮೆಸ್ಸಿ, ಈವರೆಗೆ ಒಟ್ಟು 18 ಗೋಲುಗಳನ್ನು ಗಳಿಸಿದರು. ಮೆಸ್ಸಿಗೆ ಎಂಬಾಪೆ ತೀವ್ರ ಪೈಪೋಟಿ ನೀಡುತ್ತಿದ್ದು, ಎಂಬಾಪೆ 16 ಗೋಲು ಬಾರಿಸಿದ್ದಾರೆ.






