ಧರ್ಮಸ್ಥಳ: ಪರಿಶುದ್ಧವಾದ ಭಕ್ತಿ ಮತ್ತು ದೃಢನಂಬಿಕೆಯಿಂದ ನಮ್ಮ ಎಲ್ಲಾ ಲೌಕಿಕ ಕಷ್ಟಗಳು, ಸಮಸ್ಯೆಗಳು ಪರಿಹಾರವಾಗಿ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಮಂಗಳವಾರ ಧರ್ಮಸ್ಥಳದಲ್ಲಿ ಪ್ರವಚನಮಂಟಪದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಶಿವರಾತ್ರಿ ಜಾಗರಣೆಗೆ ಪಾದಯಾತ್ರೆಯಲ್ಲಿ ಬಂದ
ಭಕ್ತಾದಿಗಳಿಗೆ ಶುಭಹಾರೈಸಿ, ಆಶೀರ್ವದಿಸಿದರು.
ದೇವರಲ್ಲಿ ಭಕ್ತಿ ಮತ್ತು ನಂಬಿಕೆಯಲ್ಲಿ ಯಾವುದೇ ರೀತಿಯ ಭಯ, ಸಂಶಯ ಇರಬಾರದು. ನಾವು ಕೊಂಚ ತಪ್ಪಿದರೂ ದೇವರು ನಮ್ಮ ರಕ್ಷಣೆ ಮಾಡುತ್ತಾರೆ. ನಂಬಿಕೆಗಳು ಮತ್ತು ವಿಶ್ವಾಸದಿಂದ ನಮ್ಮ ದೋಷಗಳ ದಮನವಾಗುತ್ತದೆ. ತ್ಯಾಗ ಮಾಡುವುದರಿಂದ ನಾವು ಶಾಶ್ವತ ಸುಖ-ಶಾಂತಿ, ನೆಮ್ಮದಿ ಪಡೆಯಬಹುದು ಎಂದು ಹೆಗ್ಗಡೆಯವರು ಹೇಳಿ, ಪಾದಯಾತ್ರಿಗಳಿಗೆ ಶುಭ ಹಾರೈಸಿದರು.

ಪಾದಯಾತ್ರಿಗಳಿಗೆ ನಿರಂತರ ಪ್ರೇರಣೆ, ಮಾರ್ಗದರ್ಶನ ನೀಡುತ್ತಿರುವ ಬೆಂಗಳೂರಿನ ಗುರು ಹನುಮಂತಪ್ಪ ಸ್ವಾಮೀಜಿ ಮತ್ತು ಬಳಗದವರನ್ನು ಹೆಗ್ಗಡೆಯವರು ಅಭಿನಂದಿಸಿದರು.ನಾಗಸಾಧು ಧನಂಜಯ ಗಿರಿ ಗುರೂಜಿ,
ಪಾದಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ ಶುಭ ಹಾರೈಸಿದರು.
ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದರು.ಮರಿಯಪ್ಪ ಸ್ವಾಗತಿಸಿದರು. ಶಶಿಕುಮಾರ ಧನ್ಯವಾದವಿತ್ತರು.