ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಪರವಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಬಿರುಸಿನ ಪ್ರಚಾರ ನಡೆಸಿದ್ದಾರೆ.ಬಜೆಟ್ ಅಧಿವೇಶದ ಹಿನ್ನಲೆಯಲ್ಲಿ ದೆಹಲಿಗೆ ತೆರಳಿರುವ ಕ್ಯಾ. ಚೌಟ, ಕಸ್ತೂರ್ಬಾ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನೀರಜ್ ಬಸೋಯಾ ಪರ ಇಲ್ಲಿನ ಸತ್ಯ ಜೀವನ ಲೆಪ್ರಸಿ ಸೊಸೈಟಿಯಲ್ಲಿ, ಹರಿ ನಗರ ಅಭ್ಯರ್ಥಿ ಶ್ಯಾಮ್ ಶರ್ಮಾ ಪರ ಸುಭಾಷ್ ನಗರದಲ್ಲಿರುವ
ಆಟೋ ಮಾರ್ಕೆಟ್, ತಿಹಾರ್ ಗ್ರಾಮ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಕರ್ತರೊಂದಿಗೆ ಮನೆ-ಮನೆ ಪ್ರಚಾರ ನಡೆಸಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ತಿಹಾರ್ ಗ್ರಾಮದ ಪ್ರಚಾರದ ವೇಳೆ ರಾಜ್ಯಸಭಾ ಸದಸ್ಯರಾದ ಇಂದು ಗೋಸ್ವಾಮಿ ಜೊತೆಗೂಡಿ ಸಂಸದ. ಕ್ಯಾ ಚೌಟ ಬಿರುಸಿನ ಪ್ರಚಾರ ಮಾಡಿದರು.
ಕ್ಯಾ. ಚೌಟ ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹರಿನಗರ ಹಾಗೂ ಕಸ್ತೂರ್ಬಾ ನಗರ ವಿಧಾನಸಭಾ ಕ್ಷೇತ್ರಗಳ ಪ್ರಚಾರದ ಜವಾಬ್ದಾರಿಯನ್ನು ನೀಡಲಾಗಿದೆ.

ದೆಹಲಿ ಚುನಾವಣೆಗೆ ಇನ್ನು ಕೇವಲ ಎರಡು ದಿನವಷ್ಟೇ ಬಾಕಿಯಿದ್ದು, ರಾಷ್ಟ್ರ ರಾಜಧಾನಿಯ ಎಲ್ಲೆಡೆ ಈ ಬಾರಿ ಬಿಜೆಪಿ ಪರ ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಜನ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಇತ್ತೀಚೆಗೆ ನಡೆದ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ನೀಡಿದ್ದಾರೆ. ಹೀಗಾಗಿ, ದೆಹಲಿಯಲ್ಲಿ ಈ ಬಾರಿ ಬಿಜೆಪಿ ಪಕ್ಷ ಜನಾದೇಶ ಪಡೆಯುವ ವಿಶ್ವಾಸವಿದ್ದು, ಆ ದಿಸೆಯಲ್ಲಿ ಎಲ್ಲ ನಮ್ಮ ನಾಯಕರು, ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಕ್ಯಾ. ಚೌಟ ಇದೇ ವೇಳೆ ಆಶಯ ವ್ಯಕ್ತಪಡಿಸಿದ್ದಾರೆ.