ನವದೆಹಲಿ: ಕೇರಳಕ್ಕೆ ಶನಿವಾರ ನೈರುತ್ಯ ಮುಂಗಾರು ಪ್ರವೇಶಿಸಿದೆ. 2009ರ ನಂತರ, ವಾಡಿಕೆಗಿಂತಲೂ ಮುಂಚಿತವಾಗಿ ಭಾರತದ ಮುಖ್ಯಭಾಗದಲ್ಲಿ ಮುಂಗಾರು ಪ್ರವೇಶಿಸಿರುವುದು ಇದೇ ಮೊದಲು (2009ರಲ್ಲಿ ಮೇ 23ರಂದು ಮುಂಗಾರು ಪ್ರವೇಶಿಸಿತ್ತು) ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಸಾಮಾನ್ಯವಾಗಿ
ನೈರುತ್ಯ ಮುಂಗಾರು ಜೂನ್ 1ರಂದು ಕೇರಳಕ್ಕೆ ಪ್ರವೇಶಿಸುತ್ತದೆ. ಜುಲೈ 8ರ ಒಳಗಾಗಿ ಇಡೀ ದೇಶವನ್ನುಆವರಿಸಿಕೊಳ್ಳುತ್ತದೆ. ಸೆಪ್ಟೆಂಬರ್ 17ರ ಸುಮಾರಿಗೆ ವಾಯವ್ಯ ಭಾರತದಿಂದ ಸ್ಥಳಾಂತರಗೊಂಡು,ಅಕ್ಟೋಬರ್ 15ರ ಹೊತ್ತಿಗೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.ಕಳೆದ ವರ್ಷ ಮೇ 30ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು.
ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ, 13 ದಿನಗಳು ಮುಂಚಿತವಾಗಿ ರಾಜ್ಯಕ್ಕೆ ನೈರುತ್ಯ ಮುಂಗಾರು ಅಪ್ಪಳಿಸಿತ್ತು. 2023ರಲ್ಲಿ ಜೂನ್ 8, 2022ರಲ್ಲಿ ಮೇ 29, 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8 ಹಾಗೂ 2018ರಲ್ಲಿ ಮೇ 29ರಂದು ಪ್ರವೇಶಿಸಿತ್ತು.
1975ರಿಂದ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 1990ರಲ್ಲಿ ಮೇ 19ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು.
‘ಕೇರಳಕ್ಕೆ ಮುಂಚಿತವಾಗಿ ಮುಂಗಾರು ಪ್ರವೇಶಿಸಿದ್ದರೂ, ಇಡೀ ದೇಶವನ್ನು ತಕ್ಷಣವೇ ಆವರಿಸಿಕೊಳ್ಳುತ್ತದೆ ಎಂದು ಈಗಲೇ ಅಂದಾಜಿಸಲು ಸಾಧ್ಯವಿಲ್ಲ. ಜಾಗತಿಕ ಹಾಗೂ ಪ್ರಾದೇಶಿಕವಾಗಿ ಸಾಕಷ್ಟು ವ್ಯತ್ಯಾಸಗಳು ಉಂಟಾಗುತ್ತವೆ’ ಎಂದು ಐಎಂಡಿಯ ಅಧಿಕಾರಿಗಳು ತಿಳಿಸಿದ್ದಾರೆ.