ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ ಭಾರತ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.ಇದರೊಂದಿಗೆ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತೌಹಿದ್ ಹೃದೋಯ್ (100) ಶತಕದ ನೆರವಿನಿಂದ 49.4 ಓವರ್ಗಳಲ್ಲಿ 228 ರನ್ಗಳಿಗೆ ಎಲ್ಲಾ ವಿಕೆಟ್ಗಳನ್ನು
ಕಳೆದುಕೊಂಡಿತು.ಐದು ವಿಕೆಟ್ ಗಳಿಸಿದ ಮೊಹಮ್ಮದ್ ಶಮಿ ಬಾಂಗ್ಲಾ ಓಟಕ್ಕೆ ಕಡಿವಾಣ ಹಾಕಿದರು.ಬಳಿಕ ಅಮೋಘ ಶತಕದ ಗಳಿಸಿದ ಶುಭಮನ್ ಗಿಲ್ (101*) ನೆರವಿನಿಂದ ಭಾರತ 46.3 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ರೋಹಿತ್ ಶರ್ಮಾ 41, ವಿರಾಟ್ ಕೊಹ್ಲಿ 22, ಶ್ರೇಯಸ್ ಅಯ್ಯರ್ 15 ಹಾಗೂ ಅಕ್ಷರ್ ಪಟೇಲ್ 8 ರನ್ ಗಳಿಸಿದರು. ಕೆ.ಎಲ್.ರಾಹುಲ್ ಅಜೇಯ 41 ರನ್ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.ಇದು ಏಕದಿನ ಕ್ರಿಕೆಟ್ನಲ್ಲಿ ಗಿಲ್ ಬಾರಿಸಿದ 8ನೇ ಶತಕವಾಗಿದೆ. ಆ ಮೂಲಕ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಸಾಬೀತುಪಡಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿತು. ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಐದು ವಿಕೆಟ್ಗಳ ಸಾಧನೆ ಮಾಡಿದರು. ಅತ್ತ ದಿಟ್ಟ ಹೋರಾಟ ನೀಡಿದ ಬಾಂಗ್ಲಾದೇಶದ ತೌಹಿದ್ ಹೃದೋಯ್ ಅಮೋಘ ಶತಕ ಗಳಿಸಿದರು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶದ ಆರಂಭ ಉತ್ತಮವಾಗಿರಲಿಲ್ಲ. ಭಾರತೀಯ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಹರ್ಷೀತ್ ರಾಣಾ ಆರಂಭದಲ್ಲೇ ಬಲವಾದ ಹೊಡೆತ ನೀಡಿದರು.
ಆರಂಭಿಕ ಸೌಮ್ಯ ಸರ್ಕಾರ್ ಹಾಗೂ ನಾಯಕ ನಜ್ಮುಲ್ ಹುಸೇನ್ ಶಾಂತೊ ಅವರನ್ನು ಶೂನ್ಯಕ್ಕೆ ಹೊರದಬ್ಬಿದರು.
ಬಳಿಕ ದಾಳಿಗಿಳಿದ ಅಕ್ಷರ್ ಪಟೇಲ್ ಡಬಲ್ ಆಘಾತ ನೀಡಿದರು. ತನ್ಜೀದ್ ಹಸನ್ (25) ಹಾಗೂ ಮುಶ್ಫೀಕರ್ ರಹೀಮ್ (0) ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ.ಪರಿಣಾಮ 8.3 ಓವರ್ಗಳಲ್ಲಿ 35 ರನ್ ಗಳಿಸವುಷ್ಟರಲ್ಲಿ ಪ್ರಮುಖ ಐದು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ಈ ಮಧ್ಯೆ ನಾಯಕ ರೋಹಿತ್ ಶರ್ಮಾ ಸುಲಭ ಕ್ಯಾಚ್ ಕೈಚೆಲ್ಲಿದ ಪರಿಣಾಮ ಸ್ಪಿನ್ನರ್ ಅಕ್ಷರ್ ಪಟೇಲ್ಗೆ ಹ್ಯಾಟ್ರಿಕ್ ವಿಕೆಟ್ ಗಳಿಸುವ ಅವಕಾಶ ನಷ್ಟವಾಯಿತು.
ಇದರ ಸ್ಪಷ್ಟ ಲಾಭ ಪಡೆದ ಜಾಕರ್ ಅಲಿ, ತೌಹಿದ್ ಹೃದೋಯ್ ಅವರೊಂದಿಗೆ ಸೇರಿಕೊಂಡು ತಂಡವನ್ನು ನಿಧಾನವಾಗಿ ಮುನ್ನಡೆಸಿದರು. ಅವರಿಬ್ಬರು ಭಾರತೀಯ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು.
ಹೃದೋಯ್ ಹಾಗೂ ಜಾಕರ್ ಆರನೇ ವಿಕೆಟ್ಗೆ 154 ರನ್ಗಳ ಜೊತೆಯಾಟ ಕಟ್ಟಿದರು. ಆ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು. ಜಾಕರ್ 114 ಎಸೆತಗಳಲ್ಲಿ 68 ರನ್ (4 ಬೌಂಡರಿ) ಗಳಿಸಿದರು.ಅತ್ತ ಸ್ನಾಯು ಸೆಳೆತದ ನಡುವೆಯೂ ದಿಟ್ಟ ಹೋರಾಟ ತೋರಿದ ಹೃದೋಯ್ ಶತಕದ ಸಾಧನೆ ಮಾಡಿದರು. ಹೃದೋಯ್ 118 ಎಸೆತಗಳಲ್ಲಿ 100 ರನ್ (6 ಬೌಂಡರಿ, 2 ಸಿಕ್ಸರ್) ಗಳಿಸಿದರು.
ಇನ್ನುಳಿದಂತೆ ರಿಷಾದ್ ಹೊಸೈನ್ 18 ಹಾಗೂ ತಸ್ಕಿನ್ ಅಹ್ಮದ್ 3 ರನ್ ಗಳಿಸಿದರು.
ಭಾರತದ ಪರ ಶಮಿ 53 ರ್ ನೀಡಿ ಐದು ವಿಕೆಟ್ ಗಳಿಸಿದರು. ಅಲ್ಲದೆ ಏಕದಿನದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಸಾಧನೆ ಮಾಡಿರುವ ಶಮಿ, ಐಸಿಸಿ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್ ಎನಿಸಿದರು.ಹರ್ಷಿತ್ ರಾಣಾ ಮೂರು ಮತ್ತು ಅಕ್ಷರ್ ಪಟೇಲ್ ಎರಡು ವಿಕೆಟ್ ಗಳಿಸಿ ಮಿಂಚಿದರು.