ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ಇವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನೇಮಕ ಮಾಡಿ ಇದೀಗ ತಾತ್ಕಾಲಿಕ ತಡೆ ನೀಡಿರುವುದು ಸರಿಯಲ್ಲ ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಗೋಕುಲ್ದಾಸ್ ಆಗ್ರಹಿಸಿದ್ದಾರೆ. ನೇಮಕ ಮಾಡಿ ಆದೇಶ ನೀಡಿದ ನಂತರ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ಮಾಡಲು
ಮಾಧ್ಯಮ ಪ್ರಕಟಣೆ, ಪ್ರಚಾರ ಫಲಕ, ಆಮಂತ್ರಣ ಪತ್ರಿಕೆ, ಊಟದ ವ್ಯವಸ್ಥೆ, ಸಭಾಭವನ ಮತ್ತು ಅತಿಥಿಗಳನ್ನು ಆಹ್ವಾನಿಸುವ ಕಾರ್ಯವನ್ನು ಮಾಡಲಾಗಿದ್ದು ಇದೀಗ ತಡೆ ನೀಡಿರುವುದು ಕಾರ್ಯಕರ್ತರಿಗೆ ನೋವು, ಗೊಂದಲ ಉಂಟಾಗಿದೆ. ಈಗಾಗಲೇ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಕೊರತೆಯಿಂದಾಗಿ ಈ ಹಿಂದೆ ನಡೆದ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿ ಪಕ್ಷಕ್ಕೆ ಕೆಟ್ಟ ಹೆಸರು ಬಂದಿರುತ್ತದೆ. ಕೆಲವರ ಮಾತು ಕೇಳಿ ಈ ರೀತಿಯಲ್ಲಿ ರಾಜ್ಯಾಧ್ಯಕ್ಷರು ಕೈಗೊಂಡ ತಡೆಯಾಜ್ಞೆ ಕ್ರಮ ಸರಿಯಲ್ಲ. ಈ ನಡೆಯಿಂದಾಗಿ ಹಳ್ಳಿ ಹಳ್ಳಿಯ ಯುವ ಉತ್ಸಾಹಿ ಕಾರ್ಯಕರ್ತರಿಗೆ ಬೇಸರ ಉಂಟಾಗಿರುವುದಲ್ಲದೇ ಇದು ಮುಂಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಿಗೆ ಸ್ಪರ್ಧಿಸುವ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕಲಿದ್ದಾರೆ. ಆದ್ದರಿಂದ ಪಕ್ಷದ ಉಳಿವಿಗಾಗಿ ಜಿಲ್ಲಾ ಮತ್ತು ರಾಜ್ಯದ ನಾಯಕರುಗಳು
ರಾಧಾಕೃಷ್ಣ ಬೊಳ್ಳೂರು ಅವರನ್ನೇ ಬ್ಲಾಕ್ ಅಧ್ಯಕ್ಷರಾಗಿ ಮುಂದುವರೆಸಲು ತಡೆಯಾಜ್ಞೆ ತೆರವುಗೊಳಿಸಿ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಖಂಡನೀಯ: ಭವಾನಿಶಂಕರ
ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರನ್ನಾಗಿ ರಾಧಾಕೃಷ್ಣ ಬೊಳ್ಳೂರು ರವರನ್ನು ಕೆಪಿಸಿಸಿ ಅಧ್ಯಕ್ಷರು ನೇಮಕ ಮಾಡಿ ಇದೀಗ ಕೆಲವು ನಾಯಕರ ಮಾತು ಕೇಳಿ ಅದಕ್ಕೆ ತಡೆ ನೀಡಿರುವುದು ಖಂಡನೀಯ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ ಕಲ್ಮಡ್ಕ ಹೇಳಿದ್ದಾರೆ.ಸುಳ್ಯದಲ್ಲಿ ಈಗಾಗಲೇ ಸಹಕಾರಿ ಸಂಘಗಳಲ್ಲಿ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ, ಎಂ ಎಲ್ ಎ ಚುನಾವಣೆಗಳಲ್ಲಿ ಸೋತು ಕಾಂಗ್ರೆಸ್ ಐ ಸಿ ಯುನಲ್ಲಿದೆ.
ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವ ನಾಯಕರ ಮತ್ತು ಕಾರ್ಯಕರ್ತರಲ್ಲಿ ಹೊಸ ಹುರುಪು ನೀಡಿದ್ದ ರಾಧಾಕೃಷ್ಣ ಬೊಳ್ಳೂರು ರವರ ನೇಮಕಾತಿ ತಡೆಯನ್ನು ಕೂಡಲೇ ಹಿಂಪಡೆದು ಅವರನ್ನೇ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.