ಸುಳ್ಯ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸುಳ್ಯದಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಯುತಿದೆ. ಕ್ಷೇತ್ರದ ಎಲ್ಲಾ ಬೂತ್ಗಳಲ್ಲಿ ಎರಡು ಹಂತದಲ್ಲಿ ಮನೆ ಭೇಟಿ ಮಾಡಿ ಪ್ರಚಾರ ಕಾರ್ಯ ಮಾಡಲಾಗಿದೆ. ಏ.21ರಂದು ಕ್ಷೇತ್ರದಾದ್ಯಂತ ಎಲ್ಲಾ ಮನೆಗಳನ್ನು ಸಂಪರ್ಕಿಸುವ ಮಹಾ ಸಂಪರ್ಕ ಅಭಿಯಾನ ನಡೆಯಲಿದೆ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 10 ವರ್ಷಗಳಲ್ಲಿ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನಪರವಾದ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನೂ ಈಡೇರಿಸಿದೆ. ವಿಕಸಿತ ಭಾರತ ಕಲ್ಪನೆಯೊಂದಿಗೆ 2047 ರಲ್ಲಿ ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಿಂದ ಯಾವುದೇ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ವಿದ್ಯುತ್ ಸರಿಯಾಗಿ ನೀಡದೆ ಪವರ್ ಕಟ್ ಭಾಗ್ಯ ಕಲ್ಪಿಸಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಸುಳ್ಯ ಕ್ಷೇತ್ರದಿಂದ 60 ಸಾವಿರ ಮತಗಳ ಅಂತರದ ಬಹುಮತ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಮಾತನಾಡಿ ‘ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಳೆದ 10 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ದಿಸೆಯಲ್ಲಿ ಮುನ್ನಡೆಸಿದೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆ ಬಜೆಟ್ ಮೀರಿದ ಆಶ್ವಾಸನೆಯಾಗಿದೆ.ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಇದರಿಂದ ಅಭಿವೃದ್ಧಿ ಕುಂಠಿತ ಆಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಸುಳ್ಯ ವಿಧಾನಸಭಾ ಕ್ಷೇಯ್ರದ ಚುನಾವಣಾ ಪ್ರಭಾರಿ ಅಪ್ಪಯ್ಯ ಮಣಿಯಾಣಿ, ಸುದರ್ಶನ ಪಾತಿಕಲ್ಲು, ಹೇಮಂತ ಮಠ, ಪ್ರದೀಪ್ ಕೊಲ್ಲರಮೂಲೆ ಉಪಸ್ಥಿತರಿದ್ದರು.