ಸುಳ್ಯ:ರಾಜ್ಯ ಸರಕಾರ ಅನುಷ್ಠಾನ ಮಾಡಿರುವ ಗ್ಯಾರಂಟಿ ಯೋಜನೆ ಜನರ ಮನ ಗೆದ್ದಿದೆ. ಚುನಾವಣೆಯಲ್ಲಿ ಇದು ಪ್ರತಿಫಲಿಸಲಿದ್ದು ರಾಜ್ಯದಲ್ಲಿ ಕಾಂಗ್ರೆಸ್ 16 ರಿಂದ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ಅವಧಿಯಲ್ಲಿ
ಬಿಜೆಪಿ ಅಚ್ಛೆ ದಿನ ನೀಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಏರಿ ಬಳಿಕ ಅಚ್ಛೇ ದಿನ ನೀಡುವ ಬದಲು ಸಂಕಷ್ಟದ ದಿನಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ನೀಡಿ ಅದನ್ನು ಈಡೇರಿಸಿ ಜನತೆಗೆ ಅಚ್ಛೇ ದಿನಗಳನ್ನು ನೀಡಿದೆ ಎಂದು ಹೇಳಿದರು. ಬಿಜೆಪಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ ಬಿಜೆಪಿ ಇದೀಗ ಮತ್ತೊಮ್ಮೆ ಚುನಾವಣೆಯಲ್ಲಿ
ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಮತ್ತೆ ಅಧಿಕಾರಕ್ಕೆ ಏರಲು ಪ್ರಯತ್ನಿಸುತ್ತಿದೆ. ಆದರೆ ಇದಕ್ಕೆ ಜನತೆ ಅವಕಾಶ ನೀಡುವುದಿಲ್ಲ ಎಂದ ಅವರು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಗಳನ್ನು ಘೋಷಿಸಿ ಅದರಂತೆ ಅದನ್ನು ಈಡೇರಿಸಿ ಜನತೆಯ ಬದುಕಿಗೆ ಹತ್ತಿರವಾಗಿದೆ. ಜನತೆ ಸರಕಾರದ ಐದು ಗ್ಯಾರಂಟಿ ಗಳನ್ನು ಒಪ್ಪಿಕೊಂಡಿದ್ದಾರೆ. ಅದರಂತೆ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಸುಳ್ಯದಲ್ಲಿ ಸರಕಾರದ ಗ್ಯಾರಂಟಿಗಳು ಉತ್ತಮ ರೀತಿಯಲ್ಲಿ ಫಲಾನುಭವಿಗಳಿಗೆ ತಲುಪಿದೆ. ಕಾಂಗ್ರೆಸ್ ಸರಕಾರದ ಯೋಜನೆಯನ್ನು ಪ್ರತೀ ಫಲಾನುಭವಿಗಳು ಸಂತಸ ಪಡುತ್ತಿದ್ದಾರೆ. ವಿವಿಧ ಕಾರಣಗಳಿಂದ ಯೋಜನೆಯಿಂದ ಬಾಕಿಯಾಗಿರುವ ಅರ್ಹರಿಗೂ ಮುಂದಿನ ದಿನಗಳಲ್ಲಿ ಯೋಜನೆ ದೊರಕಿಸುವ ಕೆಲಸ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಕೆಪಿಸಿಸಿ ವಕ್ತಾರೆ ಶೈಲಜಾ ಅಮರನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಪಿಸಿಸಿ ಸದಸ್ಯೆ ಸರಸ್ವತಿ ಕಾಮತ್, ಮುಖಂಡರಾದ ರಾಜೀವಿ ರೈ, ವಹಿದಾ ಇಸ್ಮಾಯಿಲ್, ಇಕ್ಬಾಲ್ ಎಲಿಮಲೆ, ಕೆ.ಎಸ್.ಉಮ್ಮರ್, ಶರೀಪ್ ಕಂಠಿ, ಸಿದ್ದಿಕ್ ಕೊಕ್ಕೊ, ಖಲಂದರ್ ಎಲಿಮಲೆ, ಸುಜಯಾ ಕೃಷ್ಣ, ಪ್ರವೀಣಾ ಮರುವಂಜ, ಲೀಲಾ ಮನಮೋಹನ್, ಜೂಲಿಯಾ ಕ್ರಾಸ್ತಾ, ಸಂಧ್ಯಾ ಮಂಡೆಕೋಲು ಮತ್ತಿತರರು ಉಪಸ್ಥಿತರಿದ್ದರು.