ಸುಳ್ಯ:ಮೆಸ್ಕಾಂ ಸಲಹಾ ಸಮಿತಿ ಸದಸ್ಯರ ವೈಫಲ್ಯ ಮತ್ತು ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತದಿಂದಾಗಿ ಮೆಸ್ಕಾಂ ಜನಸಂಪರ್ಕ ಸಭೆ ರದ್ದುಗೊಂಡಿರುವುದು ದುರದೃಷ್ಟಕರ, ಇದು ಸುಳ್ಯದ ಗ್ರಾಹಕರಿಗೆ ಮತ್ತು ಜನರಿಗೆ ಮಾಡಿದ ದ್ರೋಹ ಎಂದು ಸುಳ್ಯ ಬಿಜೆಪಿ ಟೀಕಿಸಿದೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ಸುಳ್ಯ ಮಂಡಲ ಸಮಿತಿಯ
ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಮೆಸ್ಕಾಂ ಸಲಹಾ ಸಮಿತಿ ಸಭೆಯನ್ನು ಅಧಿಕಾರಿಗಳು ಕರೆಯಬೇಕು, ಕಾಲ ಕಾಲಕ್ಕೆ ಸಭೆ ನಡೆಯವಂತೆ ನೋಡಿಕೊಳ್ಳಬೇಕಾದುದು ಸಲಹಾ ಸದಸ್ಯರ ಜವಾಬ್ದಾರಿ. ಇದ್ಯಾವುದನ್ನೂ ಮಾಡದೆ ಜನಸಂಪರ್ಕ ಸಭೆಯಲ್ಲಿ ಧರಣಿ ಮಾಡಿ ಸಭೆಯನ್ನು ಮುಂದೂಡುವಂತೆ ಅಧಿಕಾರಿಗಳ ಮೇಲೆ ಒತ್ತಡ ತಂದು ಸಭೆಯನ್ನು ರದ್ದು ಮಾಡುವಂತೆ ಮಾಡಿರುವುದು ಸಲಹಾ ಸಮಿತಿ ಸದಸ್ಯರ ಅಸಹಾಯಕತೆ ಮತ್ತು ಅಸಮರ್ಥತೆಯನ್ನು ಎತ್ತಿ ತೋರಿಸಲು ಮತ್ತು ಕಾಂಗ್ರೆಸ್ ಮಧ್ಯೆಯ ಗುಂಪುಗಾರಿಕೆಗೂ ಇದು ವೇದಿಕೆಯಾಗಿದೆ.
ಸಭೆಯನ್ನು ರದ್ದು ಮಾಡಿದ ಕಾರಣ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದ ಗ್ರಾಹಕರಿಗೆ, ಜನರಿಗೆ ತೊಂದರೆಯಾಗಿದೆ. ಕಾಂಗ್ರೆಸ್ಗೆ ಜನರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ, ಅವರಿಗೆ ತಮ್ಮ ಸ್ವಪ್ರತಿಷ್ಟೆಯೇ ಮುಖ್ಯ ಹೊರತು ಜನರ ಸಮಸ್ಯೆ ಮುಖ್ಯ ಅಲ್ಲ ಎಂದು ಅವರು ಹೇಳಿದರು.
ಅಧಿಕಾರಿಗಳ ಮತ್ತು ಸಲಹಾ ಸಮಿತಿ ಸದಸ್ಯರ ಸಮನ್ವತೆಯ ಕೊರತೆ ಮತ್ತು ಕಾಂಗ್ರೆಸ್ ಮಧ್ಯೆಯ ಭಿನ್ನಮತ ಇಲ್ಲಿ ಎದ್ದು ಕಾಣುತ್ತಿತ್ತು ಎಂದು ವಿನಯಕುಮಾರ್ ಕಂದಡ್ಕ ಹೇಳಿದರು. ಶಾಸಕರು ಸಲಹಾ ಸಮಿತಿಯಲ್ಲಿ ಭಾಗವಹಿಸುವುದು ಖಡ್ಡಾಯ ಅಲ್ಲ, ಆದರೆ ಶಾಸಕರ ಗಮನಕ್ಕೆ ತಂದು ಸಲಹಾ ಸಮಿತಿ ಸಭೆ ಕರೆಯಬೇಕಿತ್ತು ಎಂದು ಅವರು ಹೇಳಿದರು.













