*ಕಮಲಾಕ್ಷ ನಂಗಾರು.
ಸುತ್ತಲೂ ಪ್ರಕೃತಿ ಮಾತೆಯ ಸೊಬಗಿನೊಂದಿಗೆ ಮೈ ತಳೆದ ತೆಂಗಿನ ಮರದ ತೋಟ, ಮಧ್ಯದಲ್ಲಿ ಪ್ರಭು ಶ್ರೀ ರಾಮನ ಪಾದುಕೆಯನ್ನು ಪೂಜಿಸುವ ಶ್ರೀ ದೇವರ ಒಂದು ಪುಟ್ಟ ಸುಂದರ ಗುಡಿ ಪಕ್ಕದಲ್ಲೇ ವಿರಾಜ ಮಾನಿಸುತ್ತಿದೆ ದೇಶದ ಅದೆಷ್ಟೋ ಪುಣ್ಯ ಕ್ಷೇತ್ರಗಳಿಗೆ ಶ್ರೀ ದೇವರ ವಿವಿಧ ರಥ ನಿರ್ಮಿಸಿಕೊಡುವ ರಥ ನಿರ್ಮಾಣಾಲಯ, ಮಾರು ದೂರ ಕ್ರಮಿಸಿದರೆ ಇತಿಹಾಸ ಪ್ರಸಿದ್ಧ ಕೋಟಿಲಿಂಗೇಶ್ವರ ದೇವರ ಪುಣ್ಯ ಸ್ಥಳ. ಇಂತಹ ವಿಶೇಷವೂ ಅನುಕರಣೀಯವೂ ಆದ ಪ್ರದೇಶದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಈ ನಾಡು ಕಂಡ ಅದ್ಭುತ ರಥ ಶಿಲ್ಪಿಯೋರ್ವರು ಮತ್ತು
ಅವರ ಸುಪುತ್ರರ ಸಾರಥ್ಯದಲ್ಲಿ ಸಿದ್ಧವಾಗುತ್ತಿದೆ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಭಕ್ತರ ಪಾಲಿನ ಆರಾಧ್ಯ ದೇವರು ಕುಕ್ಕೇ ಪುರಾದೀಶನಿಗೆ ಸಮರ್ಪಣೆಯಾಗಲಿರುವ ಬೆಳ್ಳಿರಥ.
ಕುಕ್ಕೆಯ ಪರಂಪರೆಯೇ ಅಂತಹಃದು; ಶ್ರೀ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೇವೆಗಳನ್ನು ಕಾಲಕಾಲಕ್ಕೆ ಭಕ್ತರ ಮೂಲಕ ಮಾಡಿಸಿಕೊಂಡ ಅನೇಕ ನಿದರ್ಶನಗಳಿವೆ. ಇದರ ನೆನಪು ಮಾಸುವ ಮುನ್ನವೇ ಭಕ್ತರೊಬ್ಬರಿಂದ ಬೆಳ್ಳಿಯ ರಥಕ್ಕೆ ಸಂಕಲ್ಪ ಮಾಡುವಂತೆ ಅನುಗ್ರಹಿಸಿದ್ದು ಶ್ರೀ ದೇವರ ಪವಾಡವೇ ಸರಿ.ಅಂತೆಯೇ ಶ್ರೀ ದೇವರಿಗೆ ಈ ವರುಷದ ಚಂಪಾಷಷ್ಠಿಗೆ

ರಥವೇರುವ ಮುನ್ನವೇ ತನ್ನ ಆಲಯದೊಳಗೊಂದು ರಜತ ರಥವೇರಿ ಪ್ರದಕ್ಷಿಣಿ ಮಾಡುವ ಸಂಕಲ್ಪವಿತ್ತೇನೋ, ಆ ಭಗವಂತನೇ ಬಲ್ಲ.
ಸುಳ್ಯದ ಮಣ್ಣಿನ ಗುಣವೇ ಅದು ಭಗವಂತ ನೀಡಿದ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ಭಗವಂತನಿಗೇ ಸಮರ್ಪಿಸುವ ಭಕ್ತ ಬಂಧುಗಳ ದೊಡ್ಡ ಪಟ್ಟಿಯನ್ನೇ ದಾಖಲಿಸಬಹುದು.ಅಂತಹ ಪುಣ್ಯ ಕಾರ್ಯಕ್ಕೆ ಈ ಬಾರಿ ಮುಂದಡಿ ಇಟ್ಟವರು ಸುಳ್ಯ ತಾಲೂಕು ಕೇಂದ್ರವನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿದ ಆಧುನಿಕ ಸುಳ್ಯದ ಅಮರ ಶಿಲ್ಪಿ, ಶಿಕ್ಷಣ ಕಾಶಿಯ ಹರಿಕಾರ, ಬರುಡು ಭೂಮಿಯಲ್ಲಿ ಶೈಕ್ಷಣಿಕ ಮೋಡಿ ಮಾಡಿದ ಶಿಕ್ಷಣ ಗಾರುಡಿಗ ಡಾ.ಕುರುಂಜಿ ವೆಂಕಟ್ರಮಣ ಗೌಡ ಮತ್ತು ಕರುಣಾ ಸ್ವರೂಪಿ ಮಾತೆ ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ ಸುಪುತ್ರ ಪ್ರಸ್ತುತ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಕಮಿಟಿ”ಬಿ” ಯ ಅಧ್ಯಕ್ಷರೂ; ಆದ ಡಾ ರೇಣುಕಾ ಪ್ರಸಾದ್ ಕೆ.ವಿ ಮತ್ತು ಡಾ.ಜ್ಯೋತಿ ಆರ್ ಪ್ರಸಾದ್, ಪುತ್ರ ಮೌರ್ಯ ಆರ್ ಕುರುಂಜಿ ಪುತ್ರಿ ಡಾ. ಅಭಿಜ್ಞಾ ಗೋಕುಲ್ ಮತ್ತು ಅಳಿಯ ಗೋಕುಲ್.
ಡಾ ರೇಣುಕಾ ಪ್ರಸಾದ್ ಮತ್ತು ಮನೆಯವರು ನಿಡುವ ಬೆಳ್ಳಿರಥ

ನಿರ್ಮಾಣ ಕಾರ್ಯಕ್ಕೆ ಬೇಕಾದ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಲಿದೆ. ಧಾರ್ಮಿಕ ರಾಜಕೀಯ, ಸಾಮಾಜಿಕ ಮುಖಂಡರ ಸಮಕ್ಷವೇಶದಲ್ಲಿ ನಾಡಿನ ಹಿರಿಯ ರಥ ಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಟೇಶ್ವರ ಲಕ್ಷ್ಮಿ ನಾರಾಯಣಾಚಾರ್ಯರು ಮತ್ತು ಸುಪುತ್ರರಾದ ರಾಜಗೋಪಾಲಾಚಾರ್ಯ ಮತ್ತು ಇವರ ಪುತ್ರಿ ಅಂಬಿಕಾ ಆಚಾರ್ಯ ಅವರು ವೀಳ್ಯ ಪಡೆದುಕೊಳ್ಳುವುದರ ಮೂಲಕ ಜೂನ್ ೧೪ ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪ್ರಾರಂಭಿಸಿದರು. ಆಗಮ ಶಾಸ್ತ್ರದ ಪ್ರಕಾರ ರಥ ನಿರ್ಮಾಣದ ಮೂಲ ಚಿಂತನೆಗೆ ಚ್ಯುತಿ ಆಗದಂತೆ ಆಧುನಿಕ ಶೈಲಿಯನ್ನು ಮೈಗೂಡಿಸಿಕೊಂಡು ವಿಶೇಷ ಸಾಂಪ್ರದಾಯಿಕ ಕೆತ್ತನೆಗಳನ್ನೊಳಗೊಂಡ ಸುಂದರ ಬೆಳ್ಳಿಯ ರಥ ನಿರ್ಮಾಣವಾಗಿದೆ. ಅನುಭವಿ ನುರಿತ 50 ಜನರಿಗ್ಗಿಂತಲೂ ಹೆಚ್ಚಿನ ರಥ ನಿರ್ಮಾಣಕಾರರು ತನ್ನ ವಿಶೇಷ ಅನುಭವಗಳನ್ನು ಧಾರೆ ಎರೆದು ಈ ರಥ ಸುಂದರವಾಗಿ ಮೂಡಿ ಬರುವರೇ ಯಶಸ್ವಿಯಾಗಿದ್ದಾರೆ. ಈ ರಥವು ಸಂಪೂರ್ಣ ಬೆಳ್ಳಿಯಿಂದ ಮುಚ್ಚಲ್ಪಟ್ಟು ರಥದ ಕಲಶವು ಚಿನ್ನದಿಂದ

ಮಾಡಲ್ಪಟ್ಟಿದೆ.ಸುಮಾರು1.85ಕೋಟಿ ವೆಚ್ಚದಲ್ಲಿ ಭಕ್ತಿ ಶ್ರದ್ಧೆ ನಿಷ್ಠೆಯಿಂದ ನಿರ್ಮಾಣಗೊಂಡ ಒಂದು ಭಕ್ತಿಯ ಸೇವೆ ಇದಾಗಿರುತ್ತದೆ.
ಮುಖ್ಯ ಅರ್ಚಕರು ಮತ್ತು ದೈವಜ್ಞರ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಈ ರಥ ಸಮರ್ಪಣೆಗಾಗಿ ನ.3ರಂದು ರಾತ್ರಿ ಕೋಟೇಶ್ವರದಲ್ಲಿ ರಥ ನಿರ್ಮಾಣದ ಆಲಯದಲ್ಲಿ ಗುತ್ತಿ ಪೂಜೆಯೆಂಬ ಧಾರ್ಮಿಕ ವಿಧಿ ವಿಧಾನಗಳು ನಡೆದು; ನ.4ರಂದು ಬೆಳಗ್ಗೆ ಕೋಟೇಶ್ವರದ ಕೋಟಿಲಿಂಗೇಶ್ವರನ ಪುಣ್ಯ ಭೂಮಿಗೆ ಸಾಗಿ. ಅಲ್ಲಿ ಶ್ರೀದೇವರ ಮುಂಭಾಗದಲ್ಲಿ ಸ್ಥಳೀಯ ಸಂಸದರು, ಜನಪ್ರತಿನಿಧಿಗಳು, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮುಖಂಡರಗಳು ಪುಷ್ಪಾರ್ಚನೆ ಮಾಡಿ ವಿಜೃಂಭಣೆಯ ರಥ ಯಾತ್ರೆ ಪ್ರಾರಂಭಿಸಲಿದ್ದಾರೆ. ಕೋಟಿಲಿಂಗೇಶ್ವರದ ಪುಣ್ಯ ಮಣ್ಣಿನಿಂದ ಹೊರಟು 170 ಕಿ.ಮೀಸುಳ್ಯದ ಚೆನ್ನಕೇಶವನಿಗೆ ಪ್ರಾರ್ಥನೆ ಸಲ್ಲಿಸಿ.ಸುಳ್ಯದ ಕಾಂತಮಂಗಲದ ತಾಯಿ ಗುತ್ಯಮ್ಮನ ಸಾನಿಧ್ಯದಲ್ಲಿ ತಂಗಲಿದೆ ರಸ್ತೆಯ ಇಕ್ಕೆಲಗಳಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಕಾಣಿಕೆ ಸಲ್ಲಿಸಿ, ಪ್ರಾರ್ಥಿಸಿ, ರಥಾರೂಡ ವಾಹನ ಕ್ರಮಿಸುತ್ತಿರುವುದು ಈ ರಥ ಯಾತ್ರೆಯ ವಿಶೇಷ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿಯ ಧಾರ್ಮಿಕ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ವಿವಿಧ ಸಮಾಜದ ಮುಖಂಡರುಗಳು, ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಸುಳ್ಯದ ಪುರಾಧೀಶ ಚೆನ್ನಕೇಶವನ ಪುಣ್ಯ ಮಣ್ಣನ್ನು ಸಂಧ್ಯಾ ಸಮಯದಲ್ಲಿ

ತಲುಪಲಿದೆ. ನ.5ರಂದು ಸುಳ್ಯದ ಕೆ.ವಿ.ಜಿ.ವೃತ್ತದಿಂದ ಸುಳ್ಯ ವೈಭವದ ಮೆರವಣಿಗೆಯಲ್ಲಿ ರಥ ಯಾತ್ರೆ ನಡೆಯಲಿದೆ. ಸುಳ್ಯದ ರಾಜಬೀದಿಯಲ್ಲಿ ಸಾಗಿ ಪೈಚಾರು , ಸೋಣಂಗೇರಿ, ಗುತ್ತಿಗಾರು ಮಾರ್ಗವಾಗಿ ದೇವಸ್ಥಾನದ ಧಾರ್ಮಿಕ ವಿಧಿ ಸ್ವಾಗತಗಳೊಂದಿಗೆ ಸುಬ್ರಹ್ಮಣ್ಯ ಪುರ ಪ್ರವೇಶವಾಗಿ ಕುಕ್ಕೆ ಪುರಾಧೀಶನ ರಾಜ ಗೋಪುರದ ಮುಂಭಾಗದಲ್ಲಿ ಬೆಳ್ಳಿರಥದ ಭೂ ಸ್ಪರ್ಶವಾಗಲಿದೆ. ಈ ಅದ್ದೂರಿ ಮೆರವಣಿಗೆಯಲ್ಲಿ ಜಿಲ್ಲೆಯ ಪ್ರಸಿದ್ಧ ಬೊಂಬೆ ಕುಣಿತಗಳ ತಂಡ, ಭಜನಾ ತಂಡ, ಸಿಂಗಾರಿ ಮೇಳ, ಕೀಲು ಕುದುರೆ ನೃತ್ಯ, ಯಕ್ಷಗಾನ ವೇಷ ಭೂಷಣ, ಕೊಂಬು ವಾಲಗದೊಂದಿಗೆ ಮಾತೆಯರ ಪೂರ್ಣಕುಂಭದ ಮೆರುಗು ಮೇಲೈಸಲಿದೆ. ನ.9ರಂದು ರಾತ್ರಿ
ಧಾರ್ಮಿಕ ವಿಧಿ ವಿಧಾನಗಳು ನಡೆದು ನ.10 ರಂದು ಬೆಳಗ್ಗೆ ಗಣಪತಿ ಹವನ ಸುಬ್ರಹ್ಮಣ್ಯ ಹವನ ಮುಂತಾದ ವೈಧಿಕ ಕಾರ್ಯಕ್ರಮಗಳೊಂದಿಗೆ ಬೆಳಗ್ಗೆ ಗಂಟೆ 11 ರ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ರಥ ಸಮರ್ಪಣೆಯಾಗಲಿದೆ ನಂತರ ಶ್ರೀ ದೇವರಿಗೆ ವಿಶೇಷ ಪೂಜೆಗಳು ನಡೆದು ಅದೇ ದಿನ ರಾತ್ರಿ ಬೆಳ್ಳಿರಥದ ಪ್ರಥಮ ರಥ ಸೇವೆ ಡಾ.ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯಿಂದ ನಡೆಯಲಿದೆ.
ಒಂದು ಅವಿಸ್ಮರಣೀಯ ಮತ್ತು ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಿಂದ ದಾಖಲಾಗುವ ಪುಣ್ಯ ಕಾರ್ಯಕ್ಕೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ತಯಾರಾಗುತ್ತಿದೆ. ಈ ವರುಷದ ಚಂಪಾಷಷ್ಠಿ

ಮಹೋತ್ಸವಗಳಲ್ಲಿ ಬೆಳ್ಳಿರಥ ವಿಶೇಷ ಮೆರುಗು ನೀಡಲಿದೆ. ಈ ರಥ ಸಮರ್ಪಣಾ ಕಾರ್ಯವು ಡಾ.ರೇಣುಕಾ ಪ್ರಸಾದ್ ಮತ್ತು ಮನೆಯವರ, ಗುರು ಹಿರಿಯರ ಆಶಿರ್ವಾದ ಅವರು ನಂಬಿದ ದೈವ ದೇವರುಗಳ ಪ್ರೇರಣೆ ಮತ್ತು ಭಕ್ತಾಭಿಮಾನಿಗಳ ಹಾರೈಕೆಗಳೇ ಶ್ರೀ ರಕ್ಷೆಯಾಗಿ ಈ ಪುಣ್ಯ ಕಾರ್ಯ ಮಾಡುವಲ್ಲಿ ಶಕ್ತಿ ನೀಡಿದೆ. ಎಂಬುವುದು ಅವರು ಹಾಗೂ ಕುಟುಂಬದವರ ನಂಬಿಕೆ. ಇಂತಹ ವಿನೀತ ಭಾವದ ಮಾತಿನೊಂದಿಗೆ ಸಮಾಜದ ಸರ್ವರೂ ಸೇರಿ ಈ ಕಾರ್ಯವನ್ನು ಅತ್ಯಂತ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡಿರುತ್ತಾರೆ. ಬೆಳ್ಳಿರಥದ ದಾನಿಗಳಾದ ಕುರುಂಜಿ ಡಾ.ರೇಣುಕಾ ಪ್ರಸಾದ್ ಕೆ.ವಿ. ಈ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಸುಳ್ಯ ತಾಲೂಕಿನ ಸಮಾಜದ ಎಲ್ಲಾ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಧಾರ್ಮಿಕ ಮುಖಂಡರುಗಳು; ಅಕಾಡೆಮಿ ಆಫ್ ಲಿಬರಲ್ ಎಜ್ಯುಕೆಶನ್ ಇದರ ಆಡಳಿತದಡಿಯಲ್ಲಿ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಸಿಬ್ಬಂಧಿಗಳು ಸರ್ವ ರೀತಿಯಲ್ಲಿ ತಯಾರಾಗುತ್ತಿದ್ದಾರೆ. ಒಟ್ಟಿನಲ್ಲಿ ಇತಿಹಾಸದ ಪುಟದಲ್ಲಿ ದಾಖಲಾಗುವ ಅವಿಸ್ಮರಣೀಯ ಕಾರ್ಯಕ್ಕೆ ಇಡೀ ನಾಡಿಗೆ ನಾಡೇ ಸಾಕ್ಷಿಯಾಗುತ್ತಿದೆ.

ಬರಹ:ಕಮಲಾಕ್ಷ ನಂಗಾರು
(ಸಹಕಾರ: ಶ್ರೀಮತಿ ಸ್ವಾತಿ ಕಿಶೋರ್ ಕುಮಾರ್ ಕಜ್ಜೋಡಿ.)















