ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥಕ್ಕೆ ಗುತ್ತಿಪೂಜೆ ನಡೆದು ಶಾಸ್ತ್ರೋಕ್ತ ವಾಗಿ ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆಯಿತು.ಕೋಟೇಶ್ವರದ
ರಥ ಶಿಲ್ಪಿ ಕೋಟೇಶ್ವರ ಬಿ. ಲಕ್ಷ್ಮೀನಾರಾಯಣ ಆಚಾರ್ಯರು ಮತ್ತು ಪುತ್ರ ರಾಜಗೋಪಾಲಾಚಾರ್ಯ ಅವರು ನಿರ್ಮಿಸಿದ ಬೆಳ್ಳಿ ರಥಕ್ಕೆ ಗುತ್ತಿಪೂಜೆ ನಡೆಸಿದ ಬಳಿಕ ಬಳಿಕ ರಥವನ್ನು ರಥಶಿಲ್ಪಿಗಳು ಡಾ.ರೇಣುಕಾಪ್ರಸಾದ್ ಮತ್ತು ಮನೆಯವರಿಗೆ ಬಿಟ್ಟುಕೊಡುವ ಕಾರ್ಯ ನಡೆಯಿತು.
ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸೇರಿ ಹಲವು ಮಂದಿ ಪ್ರಮುಖರು, ಕುರುಂಜಿ ಕುಟುಂಬಸ್ಥರು, ಡಾ.ರೇಣುಕಾಪ್ರಸಾದ್ ಆಡಳಿತದ ಸಂಸ್ಥೆಗಳ ಸಿಬ್ಬಂದಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.

ನ.4ರಂದು ಬೆಳಿಗ್ಗೆ 8ಕ್ಕೆ ಪೂಜೆ ನಡೆದು ಕೋಟೇಶ್ವರದಿಂದ ಬೆಳ್ಳಿರಥ ಯಾತ್ರೆ ಆರಂಭಗೊಳ್ಳಲಿದೆ. ಕುಂಭಾಶಿ-ಉಡುಪಿ- ಸುರತ್ಕಲ್- ಮಂಗಳೂರು- ಬಿಸಿ ರೋಡ್-ಕಬಕ-ಪುತ್ತೂರು- ಕುಂಬ್ರ- ಕನಕಮಜಲು- ಜಾಲ್ಸೂರು ಪೈಚಾರ್ ಮೂಲಕ ಹಾದು ಬಂದು ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಸಾಯಂಕಾಲ ಸುಳ್ಯಕ್ಕೆ ಆಗಮಿಸಲಿದೆ. ಪೈಚಾರು ಬಳಿ ಪೂರ್ಣಕುಂಭದ ಮೂಲಕ ಸ್ವಾಗತಿಸಲಾಗುತ್ತದೆ. ಭವ್ಯವಾದ ಮೆರವಣಿಗೆ ಮೂಲಕ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಆಗಮಿಸಿ ಬಳಿಕ ಶ್ರೀ ಕ್ಷೇತ್ರ ಗುತ್ಯಮ್ಮನ ಸನ್ನಿಧಿಯಲ್ಲಿ ರಾತ್ರಿ ತಂಗಲಿದೆ.
ನ.5ರಂದು ಪೂ.8ರಂದು ಶ್ರೀ ಗುತ್ಯಮ್ಮ ಕ್ಷೇತ್ರದಿಂದ ಹೊರಟು ಬೆಳ್ಳಿರಥ ಯಾತ್ರೆ ಕೆವಿಜಿ ಸರ್ಕಲ್ ಬಳಿಯಿಂದ ವಿವಿಧ ವೈಧಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೊರಡಲಿದೆ.
ಬೆಳ್ಳಿರಥವನ್ನು ನ.10ರಂದು ಶಾಸ್ತ್ರೋಕ್ತವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ.















