ಮೈಸೂರು:ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅವರು ಕರ್ನಾಟಕದಲ್ಲಿ ನಿರ್ಮಿಸುತ್ತಿರುವ ಕರ್ನಾಟಕದ 3ನೇ ಭಾರತ್ ವನ ನಿರ್ಮಾಣಕ್ಕೆ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಾಲಾ ಸೀತಾರಾಮನ್ ಚಾಲನೆ ನೀಡಿದರು.ಪ್ರಧಾನಿ ನರೇಂದ್ರ ಮೋದಿ ಅವರು ಈ ಭಾರತ್ ವನ ಉದ್ಘಾಟಿಸುವುದಾಗಿ ನಿರ್ಧರಿಸಿದ್ದರೂ ಕಾರ್ಯಕ್ರಮದಲ್ಲಿ
ಕೊನೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಮೈಸೂರಿನ ಕೆ.ಸಿ.ಲೇಔಟ್ ಪಾರ್ಕ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಜೊತೆಗೆ ಒಂದು ಸಾವಿರ ವಿದ್ಯಾರ್ಥಿಗಳು ಗಿಡ ನೆಟ್ಟರು. ಮೈಸೂರಿನಲ್ಲಿ ನಿರ್ಮಿಸುವ ಭಾರತ್ ವನದ ಎರಡು ಲಕ್ಷಕ್ಕೂ ಅಧಿಕ ಗಿಡ ನೆಡಲಾಗುತ್ತದೆ. 40 ಸಾವಿರ ಗಿಡ ಕೆ.ಸಿ.ಲೇಔಟ್ ಪಾರ್ಕ್ನಲ್ಲಿ
ನೆಡಲಾಯಿತು. ಉಳಿದ ಗಿಡಗಳನ್ನು ವಿಜಯನಗರದ 17 ಲೇಔಟ್ ಪಾರ್ಕ್ನಲ್ಲಿ ನೆಡಲಾಗುವುದು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮೈಸೂರು ಮಹಾನಗರ ಪಾಲಿಕೆಯ ಸಹಕಾರದಲ್ಲಿ ಮೈಸೂರಿನಲ್ಲಿ ಆರ್.ಕೆ.ನಾಯರ್ ಅವರ ಫಾರೆಸ್ಟ್ ಕ್ರಿಯೇಟರ್ಸ್ ನೇತೃತ್ವದಲ್ಲಿ ಭಾರತ್ ವನ ನಿರ್ಮಾಣ ಮಾಡಲಾಗಿದೆ. ಮಿಯಾವಾಕಿ ಮಾದರಿಯಲ್ಲಿ ಆರ್.ಕೆ.ನಾಯರ್ ಅವರು ಕರ್ನಾಟಕದಲ್ಲಿ ನಿರ್ಮಿಸುವ ಮೂರನೇ ಭಾರತ್ ವನ ಇದಾಗಿದೆ.
ಸುಳ್ಯದಲ್ಲಿ ತಯಾರಾದ ತೆಂಗಿನ ಗರಿಯ ಬ್ಯಾಗ್:
ಸುಳ್ಯದಲ್ಲಿ ತಯಾರಿಸಿದ ತೆಂಗಿನ ಗರಿಯ ಬ್ಯಾಗ್, ಬೊಕ್ಕೆಗಳನ್ನು ಸಮಾರಂಭದಲ್ಲಿ ಅತಿಥಿಗಳಿಗೆ ನೀಡಲಾಯಿತು. ಸುನಂದ ದಂಬೆಕೋಡಿ ನೇತೃತ್ವದ ತಂಡ ನಿರ್ಮಿಸಿದ ತೆಂಗಿನ ಗರಿಯ ಬ್ಯಾಗ್, ಬೊಕ್ಕೆಗಳನ್ನು ಅತಿಥಿಗಳಿಗೆ ವಿಶೇಷವಾಗಿ ನೀಡಲಾಯಿತು ಎಂದು ಡಾ.ಆರ್.ಕೆ.ನಾಯರ್ ‘ಸುಳ್ಯ ಮಿರರ್’ಗೆ ತಿಳಿಸಿದ್ದಾರೆ. ಸುಳ್ಯದಲ್ಲಿ ನಡೆದ

ಮಕ್ಕಳ ಹಬ್ಬ ಸಂದರ್ಭದಲ್ಲಿ ಈ ರೀತಿಯ ಪ್ರಾಕೃತಿಕ ಗರಿಯ ಮಾದರಿಯನ್ನು ನೋಡಿದ ನಾಯರ್ ಅದನ್ನು ಕಾರ್ಯಕ್ರಮಕ್ಕಾಗಿ ಮೈಸೂರಿಗೆ ತರಿಸಿ ಕೊಂಡಿದ್ದರು.ಗರಿಯ ಬ್ಯಾಗ್ ಮತ್ತಿತರ ವಸ್ತುಗಳನ್ನು ನೋಡಿ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಆರ್.ಕೆ.ನಾಯರ್ ತಿಳಿಸಿದರು.














